ಸಂಸದೀಯ ಸಭೆಗೆ 9 ಲೋಕಸಭಾ ಸದಸ್ಯರ ಪೈಕಿ 6 ಸಂಸದರು ಗೈರು: ಉದ್ಧವ್ ಠಾಕ್ರೆ ಶಿವಸೇನೆ ಬಿಟ್ಟು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಸಜ್ಜು!
Views: 18
ಕನ್ನಡ ಕರಾವಳಿ ಸುದ್ದಿ: ಇಂದು ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಗೆ ಒಟ್ಟು ಒಂಭತ್ತು ಲೋಕಸಭಾ ಸಂಸದರ ಪೈಕಿ ಆರು ಜನರು ಗೈರಾಗಿದ್ದಾರೆ. ಇದರೊಂದಿಗೆ, ಡಿಸಿಎಂ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆಗೆ ಅಧಿಕೃತವಾಗಿ ಸೇರಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇಂದು ನಡೆದ ಸಂಸದೀಯ ಮಂಡಳಿ ಸಭೆಗೆ ಉದ್ಧವ್ ಬಣದ ಶಿವಸೇನಾ ಪಕ್ಷದ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ರಾಜಾಭಾವು ಮತ್ತು ಪಕ್ಷದ ಏಕೈಕ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರು ಮಾತ್ರ ಹಾಜರಾಗಿದ್ದರು. ಇನ್ನುಳಿದ ಸಂಸದರು ಗೈರಾಗಿದ್ದು, ಪಕ್ಷವು ಹೋಳಾಗಿದೆ ಎಂಬುದನ್ನು ಖಚಿತಪಡಿಸಿದೆ.
ಗೈರಾದ ಉದ್ಧವ್ ಬಣದ ಸಂಸದರಾಗಿದ್ದ ನಾಗೇಶ್ ಅಷ್ಟೀಕರ್, ಸಂಜಯ್ ದೇಶ್ಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭಾವು ಸಾಹೇಬ್ ವಾಕ್ಚೌರೆ ಇಂದಿನ ಸಭೆಗೆ ಗೈರಾದ ಮತ್ತು ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾದ ಸಂಸದರಾಗಿದ್ದಾರೆ.
ಬಂಡಾಯವೆದ್ದಿರುವ ಈ ಆರೂ ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷದೊಂದಿಗೆ ವಿಲೀನ ಮಾಡಲು ಕೋರಿ ಎಲ್ಲರೂ ಸಹಿ ಮಾಡಿದ ಪತ್ರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈಗಾಗಲೇ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ವಿಲೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸಹಿ ಪರಿಶೀಲನೆಗಾಗಿ ಕೆಲವು ಸಂಸದರು ಖುದ್ದಾಗಿ ಹಾಜರಾಗಬೇಕೆಂದು ಸ್ಪೀಕರ್ ಕಚೇರಿ ಸೂಚಿಸಿದೆ. ಸದ್ಯ ಸಂಸದರ ಸಹಿಗಳ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ವಿಲೀನ ಪ್ರಕ್ರಿಯೆ ಕುರಿತು ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ವಿಪ್ ಜಾರಿ ಮಾಡಿದ್ದ ಉದ್ಧವ್ ಶಿವಸೇನೆ: ಉದ್ಧವ್ ಬಣದ ಸಂಸದರು ಶಿಂಧೆ ಬಣಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರಿಂದ ಇಂದು ಕರೆದ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿ ಎಲ್ಲರಿಗೂ ವಿಪ್ ಜಾರಿ ಮಾಡಲಾಗಿತ್ತು. ಇದಕ್ಕೆ ಕಾರಣ, ಗೈರಾಗುವ ಬಂಡಾಯ ಸಂಸದರ ವಿರುದ್ಧ ಅನರ್ಹತೆ ಅಸ್ತ್ರ ಬಳಸುವುದಾಗಿತ್ತು.
ಸಭೆಗೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಸದ ಅರವಿಂದ್ ಸಾವಂತ್ ಅವರು, “ವಿಪ್ ಉಲ್ಲಂಘಿಸುವವರ ವಿರುದ್ಧ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ, ಶಿಂಧೆ ಬಣವು ಈ ವಿಪ್‌ನ ಸಿಂಧುತ್ವವನ್ನು ಪ್ರಶ್ನಿಸಿವೆ. 10ನೇ ಅನುಸೂಚಿಯಡಿ ಬರುವ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ, ವಿಪ್ ಅನ್ನು ಸಂಸತ್ತಿನ ಕಲಾಪಗಳಿಗೆ ಮಾತ್ರ ಜಾರಿಗೊಳಿಸಬಹುದೇ ಹೊರತು, ಪಕ್ಷದ ಆಂತರಿಕ ಸಭೆಗಳಿಗಲ್ಲ ಎಂದು ಅವರು ವಾದಿಸಿದ್ದಾರೆ.
ಲೋಕಸಭೆಯಲ್ಲಿ ಶಿವಸೇನಾ (ಯುಬಿಟಿ) ಒಟ್ಟು 9 ಸಂಸದರನ್ನು ಹೊಂದಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಕನಿಷ್ಠ 6 ಸಂಸದರು ಒಟ್ಟಿಗೆ ಪಕ್ಷ ತೊರೆಯಬೇಕಾಗುತ್ತದೆ.
ಬಂಡಾಯಗಾರರಿಗೆ ಸಗಣಿ ಬಳಿಯುವುದಾಗಿ ಎಚ್ಚರಿಕೆ: ಪಕ್ಷದಲ್ಲಿ ಬಂಡಾಯ ಎದ್ದು ಶಿಂಧೆ ಬಣಕ್ಕೆ ಸೇರುವ ಸಂಸದರಿಗೆ ಸಗಣಿ ಬಳಿಯುವುದಾಗಿ ಉದ್ಧವ್ ಬಣದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ ಎಂದೂ ಆಕ್ರೋಶ ಹೊರಹಾಕಿದ್ದಾರೆ.






