ಕಣ್ಣು, ಕಿವಿ, ಮಾತನಾಡಲು ಬಾರದ ವಿದ್ಯಾರ್ಥಿನಿ: ಪಿಯುಸಿ ಪರೀಕ್ಷೆಯಲ್ಲಿ ಟಾಪರ್!
Views: 26
ಕನ್ನಡ ಕರಾವಳಿ ಸುದ್ದಿ: ಜಗತ್ತನ್ನು ನೋಡಲು ಕಣ್ಣು ಕಾಣಿಸದು, ಮಾತನಾಡೋಣ ಅಂದ್ರೆ ಬಾಯಿ ಬರದು, ಕೇಳಲು ಕಿವಿಯೂ ಇಲ್ಲ. ಆದರೂ ಈ ಯುವತಿ ವೈಕಲ್ಯಗಳನ್ನು ಮೆಟ್ಟಿ ISC ಪರೀಕ್ಷೆಯಲ್ಲಿ (ದ್ವಿತೀಯ ಪಿಯುಸಿ) ಶೇ.98.75ರಷ್ಟು ಅಂಕ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.
ಉತ್ತರ ಪ್ರದೇಶದ ಹೆಲೆನ್ ಕೆಲ್ಲರ್’ ಎಂತಲೇ ಕರೆಸಿಕೊಳ್ಳುವ ಈ ಸಾಧಕಿ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ.
ಇವರ ಹೆಸರು ಸಾರಾ ಮೊಯಿನ್ (19). ಮೊಯಿನ್ ಅಹ್ಮದ್ ಮತ್ತು ಜೂಲಿ ಅಹ್ಮದ್ ಇವರ ತಂದೆ, ತಾಯಿ. ಲಖನೌದ ಕ್ರೈಸ್ಟ್ ಚರ್ಚ್ ಕಾಲೇಜಿನ ವಿದ್ಯಾರ್ಥಿನಿ. ಭೂಗೋಳ ಶಾಸ್ತ್ರ ಮತ್ತು ಸಮೂಹ ಮಾಧ್ಯಮ ಮತ್ತು ಸಂವಹನದಲ್ಲಿ 100ಕ್ಕೆ 100 ಅಂಕ ಗಳಿಸಿರುವ ಸಾರಾ, ಇಂಗ್ಲಿಷ್‌ನಲ್ಲಿ 98 ಮತ್ತು ವಿಜ್ಞಾನದಲ್ಲಿ 97 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.
ಪ್ರತಿ ಪರೀಕ್ಷೆಗೂ ಮುನ್ನ ಸಾರಾ ಅಂಗೈ ಮೇಲೆ ಅವರ ತಾಯಿ ತಮ್ಮ ಕೈ ಬೆರಳುಗಳ ಮೂಲಕ ಪಾಠ ಬರೆಯುತ್ತಿದ್ದರು. ಈ ಅಕ್ಷರಗಳನ್ನೇ ಜೋಡಿಸಿ ಕಲಿತುಕೊಂಡು ಸಾರಾ ಪರೀಕ್ಷೆಗೆ ತಯಾರಾಗುತ್ತಿದ್ದರು.
ಅಮೆರಿಕದ ಹೆಲೆನ್ ಕೆಲ್ಲರ್ ಅವರು ಅಂಧ ಮತ್ತು ಕಿವುಡತನದ ಮಧ್ಯೆಯೂ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದರು. ಬಳಿಕ ತಮ್ಮ ಬರಹಗಳ ಮೂಲಕ ಖ್ಯಾತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಉಪನ್ಯಾಸಕಿಯಾಗಿ ಹೆಸರು ಮಾಡಿದ್ದರು. ಬಾಲ್ಯದಲ್ಲೇ ವಿಶೇಷಚೇತನರಾಗಿದ್ದ ಇವರು ಎಲ್ಲ ವೈಕಲ್ಯತೆಗಳನ್ನು ಮೆಟ್ಟಿ ಈ ಸಾಧನೆ ಮಾಡಿದ ಅಮೆರಿಕದ ಮೊದಲ ಸಾಧಕಿ ಎಂಬ ಖ್ಯಾತಿ ಗಳಿಸಿದ್ದರು. ಆ ಬಳಿಕ ಇವರು ಹಲವರಿಗೆ ಪ್ರೇರಣೆ ಮತ್ತು ಮಾದರಿಯಾಗಿದ್ದಾರೆ. ಅಂತೆಯೇ ಸಾರಾ ಪ್ರಯಾಣ ಕೂಡ ಹೆಲೆನ್ ಕೆಲ್ಲರ್‌ಗೆ ಹೋಲುತ್ತದೆ. ಆದ್ದರಿಂದ ಶಿಕ್ಷಕರು, ಸ್ನೇಹಿತರು ಪ್ರೀತಿಯಿಂದ ಈ ಯುವತಿಯನ್ನು ಹೆಲೆನ್ ಕೆಲ್ಲರ್ ಅಂತಾ ಕರೆಯುತ್ತಾರೆ.
ಬಾಲ್ಯದಲ್ಲೇ ಎದುರಾದ ಸಮಸ್ಯೆ: ಸಾರ್ಕೊಯ್ಡೋಸಿಸ್ ಎನ್ನುವ ದೇಹದ ವಿವಿಧ ಅಂಗಾಂಗಗಳಲ್ಲಿ ಸಣ್ಣ ಉರಿಯೂತ ಗುಡ್ಡೆಗಳು (ಗ್ರಾನ್ಯುಲೋಮಾ) ಉಂಟಾಗುವ ಒಂದು ದೀರ್ಘಕಾಲಿಕ ರೋಗಕ್ಕೆ ಬಾಲ್ಯದಲ್ಲೇ ಸಾರಾ ಪೀಡಿತರಾಗುತ್ತಾರೆ. ಮೂರನೇ ತರಗತಿಯ ನಂತರ ಸಂಪೂರ್ಣವಾಗಿ ತನ್ನ ಶ್ರವಣ ಶಕ್ತಿ ಕಳೆದುಕೊಂಡು ಕಿವುಡರಾಗುತ್ತಾರೆ. ಯಾವ ಚಿಕಿತ್ಸೆಯೂ ಪರಿಣಾಮ ಬೀರಲ್ಲ. ಇದು ಕ್ರಮೇಣವಾಗಿ ಆಕೆಯ ಸಂವಹನದ ಸಾಮರ್ಥ್ಯದ ಮೇಲೂ ಹಾನಿ ಮಾಡಿದ್ದರಿಂದ ಮಾತು ಕೂಡ ನಿಂತಿದೆ.
ಎಲ್ಲ ಸಮಸ್ಯೆಗಳ ಮಧ್ಯೆಯೂ ಸಾರಾ ಮನೆಯಲ್ಲಿ ತನ್ನದೇ ಆದ ಭಾಷೆಯನ್ನು ಕಲಿಯಲು ಆರಂಭಿಸಿದಳು. ಸ್ಪರ್ಶದ ಮೂಲಕ ಸಂವಹನ ನಡೆಸಲು ಪ್ರಾರಂಭಿಸಿದರು. ನಾವು ಅವಳ ಅಂಗೈಯಲ್ಲಿ ಅಕ್ಷರಗಳನ್ನು ಬರೆದರೆ ಆಕೆ ಸನ್ನೆಗಳು ಮತ್ತು ಕೋಡೆಡ್ ಮಾದರಿಗಳ ಮೂಲಕ ಪ್ರತಿಕ್ರಿಯಿಸಲು ಶುರು ಮಾಡಿದಳು. ಬಳಿಕ ಅಧ್ಯಯನಕ್ಕೆ ಆರ್ಬಿಟ್ ರೀಡರ್‌ನಂತೆಯೇ ಬ್ರೈಲ್ ಆಧಾರಿತ ಸಾಧನವು ಸ್ವತಂತ್ರವಾಗಿ ಓದಲು ಮತ್ತು ಕಲಿಯಲು ಅನುವು ಮಾಡಿಕೊಟ್ಟಿತು ಎಂದು ಸಾರಾ ತಂದೆ ಮೊಯಿನ್ ಅಹ್ಮದ್ ತಿಳಿಸಿದ್ದಾರೆ.
ವಿಶೇಷಚೇತನ ಮಕ್ಕಳಿಗೆ ಕ್ರೈಸ್ಟ್ ಚರ್ಚ್ ಕಾಲೇಜು ವಿಶೇಷ ಕಾಳಜಿ ಮತ್ತು ಬೆಂಬಲ ನೀಡುವುದರಿಂದ ಅದೇ ಕಾಲೇಜಿಗೆ ಸಾರಾಳನ್ನು ಸೇರಿಸಿದೆವು. ಇಚ್ಛಾಶಕ್ತಿಯಿಂದ ಹತ್ತನೇ ತರಗತಿಯಲ್ಲಿ ಸಾರಾ ಶೇ.95 ರಷ್ಟು ಅಂಕ ಪಡೆದಿದ್ದಾಳೆ. ಇದು ಆಕೆಗೆ ಮತ್ತು ನಮಗೆ ಮತ್ತಷ್ಟು ಸಾಧಿಸಲು ಆತ್ಮವಿಶ್ವಾಸ ನೀಡಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.






