ಇತರೆ

ಬಾಡಿಗೆ ತಾಯ್ತನದ  ಹೆಸರಿನಲ್ಲಿ ಅನೈತಿಕ ದಂಧೆ,ಲೈಂಗಿಕ ಚಿತ್ರಹಿಂಸೆ! ಬಡ ಹುಡುಗಿಯರೇ ಟಾರ್ಗೆಟ್

Views: 53

ಕನ್ನಡ ಕರಾವಳಿ ಸುದ್ದಿ: ಮಾನವೀಯತೆಯೇ ತಲೆತಗ್ಗಿಸುವಂತಹ ಕರಾಳ ಹಾಗೂ ಆಘಾತಕಾರಿ ಪ್ರಸಂಗವೊಂದು ಇದೀಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮತ್ತು ನೇಪಾಳದ ಗಡಿಭಾಗದ ಮೂಲಕ ನೇಪಾಳಿ ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಕರೆತಂದು, ಬಾಡಿಗೆ ತಾಯ್ತನದ  ಹೆಸರಿನಲ್ಲಿ ಅನೈತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಸ್ಫೋಟಕ ವರದಿಯೊಂದು ಹೊರಬಿದ್ದಿದೆ.

ಈ ಅಕ್ರಮ ದಂಧೆಯ ಹಿಂದೆ ಬಲಿಪಶುಗಳಾಗುತ್ತಿರುವವರು ಹೆಚ್ಚಾಗಿ ನೇಪಾಳದ ಪಾಲ್ಪಾ ಮತ್ತು ಪೋಖರಾದಂತಹ ದುರ್ಗಮ ಹಾಗೂ ಗುಡ್ಡಗಾಡು ಪ್ರದೇಶಗಳ ಬಡ ಯುವತಿಯರು. ಕುಟುಂಬದ ಆರ್ಥಿಕ ಸಂಕಷ್ಟವನ್ನೇ ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳು, ಭಾರಿ ಮೊತ್ತದ ಹಣದ ಆಮಿಷವೊಡ್ಡಿ ಪೋಷಕರ ಒಪ್ಪಿಗೆಯೊಂದಿಗೆ ಈ ಯುವತಿಯರನ್ನು ಭಾರತಕ್ಕೆ ಕರೆತರುತ್ತಾರೆ. ಭಾರತ ಮತ್ತು ನೇಪಾಳದ ನಡುವಿನ ಮುಕ್ತ ಗಡಿ ವ್ಯವಸ್ಥೆಯ ಲಾಭ ಪಡೆದುಕೊಳ್ಳುವ ಈ ಕಳ್ಳಸಾಗಣೆದಾರರು, ಯಾವುದೇ ತಡೆಗಳಿಲ್ಲದೆ ಸುಲಭವಾಗಿ ಯುವತಿಯರನ್ನು ಗಡಿ ದಾಟಿಸಿ, ದೇಶದ ವಿವಿಧ ಭಾಗಗಳಿಗೆ ರವಾನಿಸುತ್ತಿದ್ದಾರೆ.

ಮಕ್ಕಳಿಲ್ಲದ ದಂಪತಿಗಳನ್ನು ಗುರಿಯಾಗಿಸಿಕೊಂಡು ಈ ಜಾಲವು ಕಾರ್ಯಾಚರಣೆ ನಡೆಸುತ್ತಿದೆ. ಐವಿಎಫ್ (IVF) ಚಿಕಿತ್ಸೆಗಳು ಫಲಕಾರಿಯಾಗುವುದಿಲ್ಲ ಮತ್ತು ಅದರಿಂದ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ತಪ್ಪು ನಂಬಿಕೆಗಳನ್ನು ಬಿತ್ತುವ ಮೂಲಕ ಅನೇಕ ದಂಪತಿಗಳನ್ನು ಈ ಅಕ್ರಮ ವಿಧಾನಕ್ಕೆ ಪ್ರೇರೇಪಿಸಲಾಗುತ್ತದೆ. ಒಪ್ಪಂದದ ಪ್ರಕಾರ, ನೇಪಾಳದಿಂದ ಕರೆತರುವ ಯುವತಿಯು ದಂಪತಿಯೊಂದಿಗೆ ಸುಮಾರು ಒಂದು ವರ್ಷ ಕಾಲ ಇರಬೇಕಾಗುತ್ತದೆ. ಯುವತಿ ಗರ್ಭಿಣಿಯಾಗುವವರೆಗೂ ದೈಹಿಕ ಸಂಬಂಧ ಬೆಳೆಸಬೇಕಾಗಿದ್ದು, ಗರ್ಭಧಾರಣೆಯಿಂದ ಹಿಡಿದು ಮಗು ಜನಿಸುವವರೆಗೆ ಆಕೆಯನ್ನು ಆ ಕುಟುಂಬದವರೇ ನೋಡಿಕೊಳ್ಳುತ್ತಾರೆ.

ಅಂದಹಾಗೆ, ಈ ವಹಿವಾಟಿನಲ್ಲಿ ಹಣವು ನೇರವಾಗಿ ಯುವತಿಯರಿಗೆ ತಲುಪದೆ, ಮಧ್ಯವರ್ತಿಗಳ ಜೇಬು ಸೇರುತ್ತಿದೆ. ಕೆಲವೊಮ್ಮೆ ಹೆಣ್ಣು ಮಗುವಿಗೆ ಒಂದು ಕೋಟಿ ರೂಪಾಯಿವರೆಗೆ ಬೇಡಿಕೆ ಇಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಆಘಾತಕಾರಿ ಸಂಗತಿ ಏನೆಂದರೆ, ನೇಪಾಳಿಗಳು ಮೂಲತಃ ಬೆಳ್ಳಗಿರುವುದರಿಂದ ಅವರಿಗೆ ಹುಟ್ಟುವ ಮಕ್ಕಳು ಕೂಡ ಬೆಳ್ಳಗೆ ಇರುತ್ತವೆ ಅನ್ನೋ ನಂಬಿಕೆಯೊಂದಿಗೆ ಈ ಅಕ್ರಮ ಜಾಲದಲ್ಲಿ ಅನೇಕ ದಂಪತಿಗಳು ತೊಡಗಿಸಿಕೊಳ್ಳುತ್ತಿದ್ದಾರೆ. ಒಪ್ಪಂದದಂತೆ ಯುವತಿಗೆ 20 ರಿಂದ 25 ವರ್ಷ ವಯಸ್ಸಾಗುವವರೆಗೆ ಅಥವಾ ನಿಗದಿತ ಅವಧಿ ಮುಗಿಯುವವರೆಗೆ ಆಕೆಯ ಪೂರ್ಣ ಹಣವು ಮಧ್ಯವರ್ತಿಗಳ ವಶದಲ್ಲೇ ಇರುತ್ತದೆ. ಕಾನೂನು ಹೋರಾಟ ನಡೆಸುವ ಶಕ್ತಿಯಿಲ್ಲದ ಮತ್ತು ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಬಡ ಯುವತಿಯರನ್ನು ಸುಲಭವಾಗಿ ಹತ್ತಿಕ್ಕಬಹುದು ಎಂಬ ದುರುದ್ದೇಶದಿಂದಲೇ ಈ ಜಾಲವು ಸಕ್ರಿಯವಾಗಿದೆ.

ಹೊರನೋಟಕ್ಕೆ ಇದು ಒಪ್ಪಂದದಂತೆ ಕಂಡರೂ, ಇದು ಕಾನೂನುಬಾಹಿರ ಹಾಗೂ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕಾದ ಗಂಭೀರ ಅಪರಾಧವಾಗಿದೆ. ಯಾವುದೇ ದೂರು ದಾಖಲಾದರೂ ಕಾನೂನಿನ ಕಣ್ಣಿಗೆ ಮಣ್ಣೆಎರಚಲು ಈ ಜಾಲಗಳು ಯತ್ನಿಸುತ್ತವೆ. ಬಡತನವನ್ನು ಬಂಡವಾಳ ಮಾಡಿಕೊಂಡು ಮಹಿಳೆಯರ ಸ್ವಾಭಿಮಾನ ಹಾಗೂ ದೇಹದ ಮೇಲೆ ನಡೆಯುತ್ತಿರುವ ಈ ವ್ಯವಸ್ಥಿತ ಶೋಷಣೆಯನ್ನು ತಡೆಯಲು ಭಾರತ ಹಾಗೂ ನೇಪಾಳ ಸರ್ಕಾರಗಳು ಕಟ್ಟುನಿಟ್ಟಾದ ಗಡಿ ಕಾವಲು ಮತ್ತು ಜಂಟಿ ಕಾರ್ಯಾಚರಣೆಯ ಮೂಲಕ ಈ ಕರಾಳ ಜಾಲದ ಮೂಲವನ್ನು ಬೇರುಸಹಿತ ಕಿತ್ತುಹಾಕಬೇಕಾದ ತುರ್ತು ಅವಶ್ಯಕತೆಯಿದೆ,

Related Articles

Back to top button
error: Content is protected !!