ATMಗಳಿಗೆ ಹಣ ಹಾಕುವ ಸಿಬ್ಬಂದಿಯಿಂದಲೇ ಕಳ್ಳತನ: ಭಿನ್ನಾಭಿಪ್ರಾಯ ಮೂಡಿ ಪರಸ್ಪರ ಹೊಡೆದಾಡಿ ಸಿಕ್ಕಿಬಿದ್ದರು!

Views: 105
ಕನ್ನಡ ಕರಾವಳಿ ಸುದ್ದಿ: ATM ಗಳಿಗೆ ಹಣ ಹಾಕುವ ಸಿಬ್ಬಂದಿಯೇ ಕಳ್ಳತನಕ್ಕಿಳಿದ ಘಟನೆ ಬೆಳಕಿಗೆ ಬಂದಿದೆ. ಎಟಿಎಂ ಹಣ ಕಳ್ಳತನ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್, ಜಸ್ವಂತ್ ಬಂಧಿತರು. ಇವರಿಂದ 51.76 ಲಕ್ಷ ನಗದು ಹಾಗೂ 90 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಂಪೇಗೌಡ ಬಡಾವಣೆ ಬಳಿ ಈ ಆರು ಆರೋಪಿಗಳು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಆರೋಪಿಗಳೆಲ್ಲರೂ ನಂದಿನಿ ಲೇಔಟ್ ಹಾಗೂ ಲಗ್ಗೆರೆ ಸುತ್ತಮುತ್ತಲಿನ ನಿವಾಸಿಗಳಾಗಿದ್ದು, ಸೆಕ್ಯೂರ್ ವ್ಯಾಲಿ ಪ್ರೈವೇಟ್ ಏಜೆನ್ಸಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಟಿಎಂಗಳಿಗೆ ಹಣ ತುಂಬಿಸುವ ಹಾಗೂ ಎಟಿಎಂ ದುರಸ್ತಿ ಕೆಲಸ ಮಾಡುತ್ತಿದ್ದರು. ಎಟಿಎಂ ರಿಪೇರಿ ಮಾಡುವಾಗ ಪಾಸ್ವರ್ಡ್ ಪಡೆದು, ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಎಟಿಎಂಗಳ ಆಡಿಟ್ ಮಾಡುವಾಗ ಕಳವು ಮಾಡಿದ್ದ ಹಣ ಹೊಂದಿಸಲು ಮತ್ತೊಂದು ಎಟಿಎಂನಲ್ಲಿ ಹಣ ಕದಿಯುವ ಪ್ರವೃತ್ತಿ ರೂಢಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ ವಿವಿಧ ಎಟಿಎಂಗಳಿಂದ 43.76 ಲಕ್ಷ ಹಣ ಎಗರಿಸಿದ್ದ ಆರೋಪಿಗಳು, ಕೆಂಪೇಗೌಡ ಲೇಔಟ್ ಬಳಿ ಹಣ ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಶ್ನಿಸಿದಾಗ ಅನುಮಾನಾಸ್ಪದವಾಗಿ ಆರೋಪಿಗಳು ವರ್ತಿಸಿದ್ದರು. ಅನುಮಾನಗೊಂಡು ಪರಿಶೀಲಿಸಿದಾಗ ಕಾರಿನಲ್ಲಿ 43.76 ಲಕ್ಷ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.