ಮಹಿಳೆ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣ ಆಸೆಗೆ ಹತ್ಯೆ: ಪ್ರಕರಣ ಭೇದಿಸಿದ ಪೊಲೀಸರು

Views: 66
ಕನ್ನಡ ಕರಾವಳಿ ಸುದ್ದಿ: ನಾಲ್ಕು ತಿಂಗಳುಗಳ ಹಿಂದೆ ವರದಿಯಾಗಿದ್ದ ಒಂಟಿ ಮಹಿಳೆಯ ನಾಪತ್ತೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2024 ನವೆಂಬರ್ 26ರಂದು ನಾಗೇನಹಳ್ಳಿಯ ಸ್ಲಂ ಬೋರ್ಡ್ ವಸತಿ ಪ್ರದೇಶದಿಂದ ಕಾಣೆಯಾಗಿದ್ದ ಮೇರಿ (59) ಎಂಬವರ ಮೃತದೇಹ ಮಾರ್ಚ್ 9ರಂದು ಬಾಗಲೂರಿನ ಹೊಸೂರು ಬಂಡೆ ಬಳಿ ಪತ್ತೆಯಾಗಿದೆ. ಚಿನ್ನಾಭರಣಗಳಿಗಾಗಿ ಮಹಿಳೆಯನ್ನು ಹತ್ಯೆಗೈದಿದ್ದ ಲಕ್ಷ್ಮಣ್ ಎಂಬ ಆರೋಪಿಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇರಿ ವಾಸವಿದ್ದ ಪ್ರದೇಶದಲ್ಲಿಯೇ ಲಕ್ಷ್ಮಣ್ ಸಹ ವಾಸವಿದ್ದ. ವಾಟರ್ ಮ್ಯಾನ್ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣ್, ಮೇರಿಯ ಮನೆಯಲ್ಲಿಯೂ ಕೆಲಸ ಮಾಡಿದ್ದರಿಂದ ಸಹಜವಾಗಿಯೇ ಪರಿಚಯವಿತ್ತು. 2 ಲಕ್ಷ ರೂ ಸಾಲ ಮಾಡಿಕೊಂಡಿದ್ದ ಆರೋಪಿ ಲಕ್ಷ್ಮಣ್, ಮೇರಿಯ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣಗಳ ಆಸೆಗೆ ನವೆಂಬರ್ 25ರಂದು ಹತ್ಯೆಗೈಯ್ಯಲು ಯೋಜನೆ ರೂಪಿಸಿದ್ದ. ಮೇರಿಯ ಮನೆಯ ವಿದ್ಯುತ್ ಸಂಪರ್ಕ ಕತ್ತರಿಸಿದರೆ, ಸರಿ ಮಾಡಲು ಹೇಗಿದ್ದರೂ ತನ್ನನ್ನೇ ಕರೆಯುತ್ತಾರೆ. ಆಗ ಸುಲಭವಾಗಿ ಹತ್ಯೆ ಮಾಡಬಹುದು ಎಂದು ಸಂಚು ಹಾಕಿದ್ದ. ಆದರೆ ವಿದ್ಯುತ್ ಸಂಪರ್ಕ ಕತ್ತರಿಸಿದರೂ ಸಹ ಮೇರಿ ಲಕ್ಷ್ಮಣ್‌ನನ್ನ ಸಹಾಯಕ್ಕೆ ಕರೆದಿರಲಿಲ್ಲ. ಹಾಗಾಗಿ ನವೆಂಬರ್ 26ರಂದು ಹತ್ಯೆಗೈದು ಮಧ್ಯಾಹ್ನ 3 ಗಂಟೆಗೆ ಆಟೋದಲ್ಲಿ ಮೇರಿಯ ಮೃತದೇಹ ಕೊಂಡೊಯ್ದು ಬಾಗಲೂರು ಸಮೀಪದ ಹೊಸೂರು ಬಂಡೆಯ ಕಸ ಡಂಪಿಂಗ್ ಯಾರ್ಡ್‌ನಲ್ಲಿ ಎಸೆದು ಬಂದಿದ್ದ. ಬಳಿಕ ಲಕ್ಷ್ಮಣ್ ಸಹ ನಾಪತ್ತೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ದಾರಿ ತಪ್ಪಿಸಲು ಮಾಸ್ಟರ್ ಪ್ಲ್ಯಾನ್: ಮೃತದೇಹ ಎಸೆದ ಲಕ್ಷ್ಮಣ್, ಬಳಿಕ ಮೇರಿಯ ಮೊಬೈಲ್ ಆನ್ ಮಾಡಿ ಕಸ ಸಂಗ್ರಹಿಸುವ ಆಟೋವೊಂದರಲ್ಲಿ ಎಸೆದಿದ್ದ. ಅದೇ ರೀತಿ ತಾನು ಬಳಸುತ್ತಿದ್ದ ಒಟ್ಟು 4 ಸಿಮ್ ಕಾರ್ಡ್‌ಗಳ ಪೈಕಿ 3 ಸಿಮ್ ಕಾರ್ಡ್‌ಗಳಿರುವ ಫೋನ್‌ಗಳನ್ನ ನವೆಂಬರ್ 26ರಂದೇ ಡಿ.ಜೆ ಹಳ್ಳಿಯಲ್ಲಿರುವ ತನ್ನ ಪತ್ನಿಯ ಮನೆಯಲ್ಲಿಟ್ಟಿದ್ದ. ಇತ್ತ ಮೇರಿಯ ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ್ದ ಕೊತ್ತನೂರು ಠಾಣೆ ಪೊಲೀಸರು, ಮಹಿಳೆಯ ಪರಿಚಯದಲ್ಲಿದ್ದ ಲಕ್ಷ್ಮಣ್‌ನ ಫೋನ್ ಕರೆ ವಿವರಗಳು, ಟವರ್ ಲೊಕೇಷನ್‌ನ್ನ ಪರಿಶೀಲಿಸಿದ್ದರು. ಅದರ ಪ್ರಕಾರ ಮೇರಿ ಕಾಣೆಯಾಗಿದ್ದ ದಿನ (ನವೆಂಬರ್ 26) ಆತನ ಲೊಕೇಶನ್ ಡಿ.ಜೆ ಹಳ್ಳಿಯಲ್ಲಿತ್ತು. ಹಾಗಾಗಿ ಪೊಲೀಸರಿಗೆ ಲಕ್ಷ್ಮಣ್‌ನ ಮೇಲೆ ಹೆಚ್ಚು ಅನುಮಾನ ಮೂಡಿರಲಿಲ್ಲ. ಆದರೂ ಸಹ ನಾಪತ್ತೆಯಾಗಿದ್ದ ಲಕ್ಷ್ಮಣ್‌ನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಸ್ನೇಹಿತೆಯೊಬ್ಬಳ ಜೊತೆ ಮಾತನಾಡಲು ಕರೆ ಮಾಡಿದಾಗ ಲಕ್ಷ್ಮಣ್‌ನ ಮತ್ತೊಂದು ಸಿಮ್ ಕಾರ್ಡ್ ಸಕ್ರಿಯವಾಗಿತ್ತು. ತಕ್ಷಣ ಆತನನ್ನ ಪತ್ತೆಹಚ್ಚಿದ ಪೊಲೀಸರು, ಕರೆತಂದು ವಿಚಾರಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ.
ಆರೋಪಿಯ ಸಮ್ಮುಖದಲ್ಲೇ ಮೃತದೇಹ ಪತ್ತೆ ಹಚ್ಚಲಾಗಿದೆ. ಮಹಿಳೆಯ ಬಳಿಯಿದ್ದ ಚಿನ್ನಕ್ಕಾಗಿ ಹತ್ಯೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.