ಸಿದ್ದಾಪುರ:ಟ್ಯಾಂಕರ್ ಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಕಳವು:ಡಿವೈಎಸ್‌ಪಿ ದಾಳಿ, ಚಾಲಕನ ಬಂಧನ,

Views: 762
ಕನ್ನಡ ಕರಾವಳಿ ಸುದ್ದಿ: ಟ್ಯಾಂಕರ್ ಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಕಳವು ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿಯಲ್ಲಿ ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದಾರೆ.ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಸಿದ್ದಾಪುರ ಪೇಟೆ ಸಮೀಪದ ಸುಬ್ಬರಾವ್ ಕಾಂಪ್ಲೆಕ್ಸ್ ಪಕ್ಕ ಇರುವ ಸರ್ವಿಸ್ ಸ್ಟೇಷನ್ ನಲ್ಲಿ ನಿತಂತರವಾಗಿ ಟ್ಯಾಂಕರ್ ಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಕಳವು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾ.10 ಸೋಮವಾರ ರಾತ್ರಿ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ದಾಳಿ ನಡೆಸಿದಾಗ ಪ್ರಮುಖ ಆರೋಪಿ ವಿಜಯ ನಾಯ್ಕ ಪರಾರಿಯಾಗಿದ್ದು, ಟ್ಯಾಂಕರ್ ಚಾಲಕ ಜಯರಾಮ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ವಿಜಯ ನಾಯ್ಕ ಟೂರಿಸ್ಟ್ ವಾಹನ ಮತ್ತು ಸಿದ್ದಾಪುರದಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದು, ಇದೇ ಸರ್ವಿಸ್ ಸ್ಟೇಷನ್‌ನಲ್ಲಿ ಆಯಿಲ್ ದಂಧೆ ನಡೆಸಲಾಗುತ್ತಿತ್ತು. ಶಂಕರನಾರಾಯಣ ಠಾಣೆ ಪಿಎಸ್‌ಐ ನಾಸೀರ್ ಹುಸೇನ್ ನೀಡಿದ ಮಾಹಿತಿಯಂತೆ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ದಾಳಿ ನಡೆಸಿದಾಗ ವಿಜಯ ನಾಯ್ಕ ಮತ್ತು ಟ್ಯಾಂಕರ್ ಚಾಲಕ ಜಯರಾಮ ಪೆಟ್ರೋಲಿಯಂ ಭಾರತ್ ಟ್ಯಾಂಕರ್ ನಿಂದ ಡೀಸೆಲ್ ಕದಿಯುತ್ತಿದ್ದರು. ಮಂಗಳೂರು ನೋಂದಣಿಯ – ಟ್ಯಾಂಕರ್, ಲೀಟರ್ ಪೆಟ್ರೋಲ್, 3 ಪೈಪ್‌ಗಳು, ಡೀಸೆಲ್ ತೆಗೆಯುವ ಲಿಫ್ಟ್ ಮೋಟಾರ್ ಇತ್ಯಾದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಿಂದ ರಾಜ್ಯದ ಬೇರೆ ಕಡೆಗೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್‌ಗಳು ಆರೋಪಿಯ ಸರ್ವಿಸ್ ಸ್ಟೇಷನ್‌ಗೆ ಬರುತ್ತಿದ್ದವು. ಇಲ್ಲಿ ಟ್ಯಾಂಕರ್ ಚಾಲಕನ ಸಹಕಾರದಿಂದಲೇ ಟ್ಯಾಂಕರ್‌ನಿಂದ ತೈಲವನ್ನು ಕದ್ದು ಸಂಗ್ರಹಿಸಲಾಗುತ್ತಿತ್ತು. ಹೀಗೆ ಸಂಗ್ರಹಿಸಿದ ಇಂಧನವನ್ನು ಆರೋಪಿ ವಿಜಯ ತನ್ನ ವಾಹನಗಳಿಗೆ ಬಳಸುತ್ತಿದ್ದ ಎಂಬ ಆರೋಪಿ ಕೇಳಿ ಬಂದಿದೆ. ಇನ್ನಷ್ಟು ಮಾಹಿತಿಗಳು ತನಿಖೆಯಿಂದ ತಿಳಿದುಬರಬೇಕಾಗಿದೆ.