ಶ್ರೀಮಂತ ಭಿಕ್ಷುಕಿ ಮನೆಯಲ್ಲಿ ಖಜಾನೆ ಕಂಡು ಬೆಚ್ಚಿಬಿದ್ದ ಪೊಲೀಸರು!

Views: 327
ಕನ್ನಡ ಕರಾವಳಿ ಸುದ್ದಿ: ಮಹಿಳಾ ಭಿಕ್ಷುಕಿಯ ಮನೆಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಬೈಕ್, ಚಿನ್ನಾಭರಣ, ಮೊಬೈನ್ ಫೋನ್ನಂತಹ ದುಬಾರಿ ವಸ್ತುಗಳನ್ನು ಕಂಡು ಪೊಲೀಸರು ಬೆಚ್ಚಿಬಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.ಸದ್ಯ ಬಿಕ್ಷುಕಿಯನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಧ್ವನ್ ಭೋಜ್ನಲ್ಲಿರುವ ಮಹಿಳೆಯ ಮನೆಯಲ್ಲಿ 12 ಮೊಬೈಲ್ ಫೋನ್, ವಿವಿಧ ದೇಶಗಳ ಬೆಳ್ಳಿ ನಾಣ್ಯ, ಐಷಾರಾಮಿ ಬೈಕ್ ಮತ್ತು ಚಿನ್ನಾಭರಣ ಕಂಡು ಬಂದಿದೆ. ಕಾಲುವೆ ಸಮೀಪದಲ್ಲಿ ಗುಡಿಸಲಿನಲ್ಲಿ ವಾಸಿಸುವ, ಭಿಕ್ಷೆ ಬೇಡುವ ಆಕೆಯ ಬಳಿ ಇಷ್ಟೊಂದು ದುಬಾರಿ ಬೆಲೆ ಬಾಳುವ ವಸ್ತು ಬಂದಿದ್ದು ಹೇಗೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.
ಬಿಕ್ಷುಕಿ ನೀಲಂ ದೇವಿ ಮತ್ತು ಆಕೆಯ ಅಳಿಯ ಚುಟುಕ್ ಲಾಲ್ ವಿರುದ್ದ ಕರ್ಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೈಕ್ ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನು ಮಹಿಳೆ ಮತ್ತು ಸಹಚರರು ಕದ್ದು ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಿಕ್ಷೆ ಬೇಡುತ್ತಿದ್ದ ನೀಲಂ ದೇವಿ ಕಳ್ಳತನಕ್ಕೆ ಸೂಕ್ತವಾದ ಮನೆಯನ್ನು ಆಯ್ಕೆ ಮಾಡುತ್ತಿದ್ದಳು. ಬಳಿಕ ಆಕೆಯ ಅಳಿಯ ಮನೆಗೆ ನುಗ್ಗಿ ದೋಚುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಕೆಟಿಎಂ ಬೈಕ್, ನೇಪಾಳ, ಕುವೈಟ್ಗಳ ಬೆಳ್ಳಿ ನಾಣ್ಯ, ಬೆಳ್ಳಿ, ಚಿನ್ನದ ಆಭರಣ, ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳಿವೆ.
ಚಿನ್ನಾಭರಣಗಳ ಪೈಕಿ ಸರ, ಮೂಗಿನ ನತ್ತು ಸೇರಿದೆ. ಆದರೆ ವಿಚಾರಣೆ ವೇಳೆ ನೀಲಂ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಚುಟುಕ್ ಲಾಲ್ ತಲೆ ಮರೆಸಿಕೊಂಡಿದ್ದಾನೆ. ಇವರಿಬ್ಬರು ಮಾತ್ರವಲ್ಲದೆ ಇನ್ನೊಂದಷ್ಟು ಮಂದಿ ಈ ವಂಚನೆಯ ಜಾಲದಲ್ಲಿದ್ದಾರೆ ಎನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ಉಳಿದವರನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.






