ಸಿರಾಜ್ ಬೆಂಕಿ ಬೌಲಿಂಗ್, 50 ರನ್‌ಗಳಿಗೆ ಆಲೌಟ್ : ಏಷ್ಯಾಕಪ್ ಇತಿಹಾಸದಲ್ಲೇ ಅತಿ ಕಡಿಮೆ ರನ್; ಬೇಡವಾದ ದಾಖಲೆ ಬರೆದ ಶ್ರೀಲಂಕಾ

Views: 172
ಕೊಲಂಬೊ: ಸೂಪರ್-4ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನ ಬಗ್ಗುಬಡಿದಿದ್ದ ಶ್ರೀಲಂಕಾ ತಂಡ ಮಹತ್ವದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದೆ. ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ 51 ರನ್‌ಗಳ ಗುರಿ ನೀಡಿದೆ.
ಈ ಮೂಲಕ 39 ವರ್ಷಗಳ ನಂತರ ಅತೀ ಕಡಿಮೆ ಮೊತ್ತಕ್ಕೆ ಲಂಕಾ ಆಲೌಟ್ ಆದ ಅಪಖ್ಯಾತಿ ಪಡೆದಿದೆ. 1984ರ ಏಷ್ಯಾಕಪ್ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವಿರುದ್ಧ 41 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಆಲೌಟ್ ಆಗಿತ್ತು. ಆ ನಂತರ 1986 ರಲ್ಲಿ ಪಾಕಿಸ್ತಾನದ ವಿರುದ್ಧ 33.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ ಭಾರತದ ವಿರುದ್ಧ 50 ರನ್‌ಗಳಿಗೆ ಆಲೌಟ್ ಆಗಿದ್ದು, ಏಷ್ಯಾಕಪ್ ಇತಿಹಾಸದಲ್ಲೇ ಅತಿ ಕಡಿಮೆ ರನ್ ದಾಖಲಿಸಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಟೀಂ ಇಂಡಿಯಾಕ್ಕೆ ಪ್ರಬಲ ಪೈಪೋಟಿ ನೀಡಲು ಕಣಕ್ಕಿಳಿದಿದ್ದ ಲಂಕಾ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಕುಶಲ್ ಪೆರೇರ ಮೊದಲ ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮಾರಕ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 4ನೇ ಓವರ್‌ನಲ್ಲಿ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಆ ನಂತರವೂ ದಾಳಿ ಮುಂದುವರಿಸಿದ ಸಿರಾಜ್ 6ನೇ ಮತ್ತು 12ನೇ ಓವರ್‌ನಲ್ಲಿ ಒಂದೊಂದು ವಿಕೆಟ್ ಪಡೆದರು. ಇದರಿಂದ ಲಂಕಾ ಮಕಾಡೆ ಮಲಗಿತು.
ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಲಂಕಾ ಕೇವಲ 6 ಓವರ್‌ಗಳಲ್ಲಿ 13 ರನ್‌ಗಳಿಗೆ ಪ್ರಮುಖ 6 ವಿಕೆಟ್ ಗಳನ್ನ ಕಳೆದುಕೊಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪತುಮ್ ನಿಸ್ಸಂಕ (2 ರನ್), ಕುಶಲ್ ಮೆಂಡಿಸ್ (17 ರನ್), ಧನಂಜಯ ಡಿ ಸಿಲ್ವಾ (4 ರನ್), ದುನಿತ್ ವೆಲ್ಲಾಳ (8 ರನ್) ಗಳಿಸಿದ್ರೆ ಕುಶಲ್ ಪೆರೇರ, ಸಾದೀರ ಸಮರವಿಕ್ರಮ, ಚರಿತ್ ಅಸಲಂಕ, ನಾಯಕ ದಸುನ್ ಶನಾಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಪ್ರಮೋದ್ ಮಧೂಶನ್ 1 ರನ್ ಗಳಿಸಿದ್ರೆ, ಮತೀಶ ಪಥಿರಣ ಶೂನ್ಯಕ್ಕೆ ಔಟಾದರು. ದುಶನ್ ಹೇಮಂತ 13 ರನ್‌ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಲಂಕಾ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್, 7 ಓವರ್‌ಗಳಲ್ಲಿ 21 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 2.2 ಓವರ್‌ಗಳಲ್ಲಿ 3 ರನ್ ನೀಡಿ 3 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.







