ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
Views: 0
ಕನ್ನಡ ಕರಾವಳಿ ಸುದ್ದಿ:18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪೋಷಕರು ಅಥವಾ ಕಾನೂನುಬದ್ಧ ಪಾಲಕರ ಅನುಮತಿಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ತಡೆಯುವ ಬಗ್ಗೆ ಪರಿಶೀಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.
‘ಜಸ್ಟ್ ರೈಟ್ಸ್ ಫಾರ್ ಚಿಲ್ಬನ್ ಅಲಯನ್ಸ್’ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಈ ವಿಚಾರ ಚರ್ಚೆಗೆ ಬಂದಿದೆ. ಮಕ್ಕಳಿಗೆ ಡಿಜಿಟಲ್ ವೇದಿಕೆಗಳಲ್ಲಿ ಖಾತೆ ತೆರೆಯಲು ಅವಕಾಶ ನೀಡುವಾಗ, ಆ ವೇದಿಕೆಗಳ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ. ಆದರೆ ಭಾರತೀಯ ಕಾನೂನಿನಡಿ ಅಪ್ರಾಪ್ತರು ಸ್ವತಂತ್ರವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಪ್ರವೇಶಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ಕಾನೂನು ಅಂಶವನ್ನು ಆಧಾರವಾಗಿಸಿಕೊಂಡು, ಸಾಮಾಜಿಕ ಜಾಲತಾಣ ಖಾತೆ ತೆರೆಯುವ ಪ್ರಕ್ರಿಯೆಯಲ್ಲಿ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬಹುದೇ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಕೋರ್ಟ್ ಹೇಳಿದೆ. ವಿಚಾರಣೆಯಲ್ಲಿ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಈ ವಿಚಾರವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಅರ್ಜಿದಾರರ ಪ್ರಕಾರ, ಮಕ್ಕಳ ಆನ್‌ಲೈನ್ ಸುರಕ್ಷತೆಗೆ ವಯಸ್ಸಿನ ಪರಿಶೀಲನೆ, ಪೋಷಕರ ಅನುಮತಿ ಮತ್ತು ಅಗತ್ಯವಿದ್ದಲ್ಲಿ ಪಾಲಕರ ಗುರುತಿನ ದೃಢೀಕರಣದಂತಹ ವ್ಯವಸ್ಥೆಗಳು ಇರಬೇಕು. ಪ್ರಸ್ತುತ ಹಲವು ಡಿಜಿಟಲ್ ವೇದಿಕೆಗಳು 13 ವರ್ಷ ಮೇಲ್ಪಟ್ಟವರಿಗೆ ಖಾತೆ ತೆರೆಯಲು ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ಪ್ರಶ್ನೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಮಕ್ಕಳು ಆನ್‌ಲೈನ್‌ನಲ್ಲಿ ಸೈಬರ್‌ಬುಲ್ಲಿಯಿಂಗ್, ವೈಯಕ್ತಿಕ ಮಾಹಿತಿಯ ದುರ್ಬಳಕೆ, ವಯಸ್ಸಿಗೆ ಸೂಕ್ತವಲ್ಲದ ವಿಷಯ ಸೇರಿದಂತೆ ಹಲವು ಅಪಾಯಗಳಿಗೆ ಒಳಗಾಗುವ ಸಾಧ್ಯತೆಯನ್ನು ಅರ್ಜಿ ಉಲ್ಲೇಖಿಸಿದೆ.






