ಕೊಲೆಯಾಗಿದ್ದಳೆಂಬ ಮಹಿಳೆ 6 ವರ್ಷ ಬಳಿಕ ಪ್ರತ್ಯಕ್ಷ!..ಆರೋಪ ಹೊತ್ತಿದ್ದ ವ್ಯಕ್ತಿಗೆ 2.5 ವರ್ಷ ಜೈಲು ಶಿಕ್ಷೆ!
Views: 11
ಕನ್ನಡ ಕರಾವಳಿ ಸುದ್ದಿ: ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ 6 ವರ್ಷಗಳ ಬಳಿಕ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಬುಧವಾರ ತನ್ನ ಪತಿ ಜತೆ ಕಾಣಿಸಿಕೊಂಡಿದ್ದಾಳೆ. ಪ್ರಕರಣದಲ್ಲಿ ಕೊಲೆ ಆರೋಪ ಕೇಸಲ್ಲಿ ನಿರಪರಾಧಿಯೊಬ್ಬ ಎರಡೂವರೆ ಶಿಕ್ಷೆ ಅನುಭವಿಸುವಂತಾಗಿದೆ.
2019ರಲ್ಲಿ ಪಾಂಡವಪುರದಿಂದ ಗೃಹಿಣಿ ಮಂಜು ನಾಪತ್ತೆಯಾಗಿದ್ದ ಬಗ್ಗೆ ಆಕೆಯ ತಂದೆ ಮೊದಲಿಗೆ ನಾಪತ್ತೆ ದೂರು ದಾಖಲಿಸಿದ್ದರು. 2 ವರ್ಷಗಳ ಬಳಿಕ ರಾಗಿಮುದ್ದನಹಳ್ಳಿಯ ಎಂ.ಆರ್.ರಾಜೇಶ್ ನದಿಗೆ ತಳ್ಳಿ ಮಗಳನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದರಿಂದ ಕೊಲೆ ಪ್ರಕರಣವಾಗಿ ಬದಲಾಗಿತ್ತು.
ರಾಜೇಶ್ 2.5 ವರ್ಷ ಜೈಲು ಶಿಕ್ಷೆ ಅನುಭವಿಸಿ, ಮೂರ್ನಾಲ್ಕು ತಿಂಗಳ ಹಿಂದೆ ಜಾಮೀನಿನಲ್ಲಿ ಹೊರಬಂದಿದ್ದ. ಮಂಜು 2ನೇ ಪತಿ ಜತೆ ಮಾಯಿಗೋನಹಳ್ಳಿಯಲ್ಲಿರುವುದು ಗೊತ್ತಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಜು, ನನ್ನ ತಂದೆ ನೀಡಿರುವ ನಾಪತ್ತೆ, ಕೊಲೆ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ, ರಾಜೇಶನಿಂದ ನನಗೆ ತೊಂದರೆಯಾಗಿಲ್ಲ ಎಂದಿದ್ದಾರೆ.
ಪಾಂಡವಪುರ ನಿಲ್ದಾಣದಲ್ಲಿ ತುರ್ತಾಗಿ ಕರೆ ಮಾಡಬೇಕೆಂದು ಮಂಜು ನನ್ನ ಮೊಬೈಲ್ನಿಂದ ಕರೆ ಮಾಡಿದ್ದಳು. ಅದರ ಆಧಾರವಾಗಿ ನನ್ನನ್ನು ಬಂಧಿಸಿದ್ದಲ್ಲದೆ, ಬೂಟುಗಾಲಿನಿಂದ ಒದ್ದು ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದರಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದೆ. ಆಕೆ ನನಗೆ ಪರಿಚಯವೇ ಇರಲಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಸುಳ್ಳು ದೂರು ನೀಡಿದವರ ವಿರುದ್ಧ ಕ್ರಮಕ್ಕೆ ರಾಜೇಶ್, ಬಿಂಡಿಗನವಿಲೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.






