ಕೋಟೇಶ್ವರದ ಬೀಜಾಡಿಯಲ್ಲಿ ಕುಂಟನಂತೆ ನಟಿಸಿ ಒಂಟಿ ಮಹಿಳೆಯ ಚಿನ್ನ ಎಗರಿಸಿದ ಕಳ್ಳ!
Views: 0
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಬೀಜಾಡಿಯ ವಿಷ್ಣುಮೂರ್ತಿ ದೇಗುಲದ ಬಳಿಯ ಒಳ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆ ಮಾರ್ಗವಾಗಿ ಸಾಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಹೆದರಿಸಿ ಆಕೆಯ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಎಳೆದು ಎಗರಿಸಿ, ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಅಗಲ ಕಿರಿದಾದ ಹೆಬ್ಬಾರ್‌ಬೆಟ್ಟು ರಸ್ತೆಯ ಬಳಿಯ ಈ ಮಾರ್ಗದಲ್ಲಿ ಅಲ್ಲಿನ ನಿವಾಸಿ ಮಹಿಳೆಯೋರ್ವರು ಒಂಟಿಯಾಗಿ ಸಂಜೆ ಸಾಗುತ್ತಿದ್ದ ಸಂದರ್ಭ ದಿಢೀರಾಗಿ ಪ್ರತ್ಯಕ್ಷವಾದ ಬರ್ಮುಡ ಧರಿಸಿದ್ದ ವ್ಯಕ್ತಿಯೋರ್ವ ಆಕೆ ಸಾಗುವ ಹಾದಿಯ ಮಧ್ಯೆ ಕುಂಟನಂತೆ ನಟಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಸಮೀಪಿಸುತ್ತಿದ್ದಂತೆ ಅಪಾಯದ ಅರಿವಾದ ಮಹಿಳೆ ಸಹಾಯಕ್ಕಾಗಿ ಕೂಗುವ ಮೊದಲೇ ಆತ ಆಕೆಗೆ ಚೂರಿತೋರಿಸಿ, ಕೈಯಲ್ಲಿದ್ದ ಬಳೆಯನ್ನು ಬಲತ್ಕಾರವಾಗಿ ಎಗರಿಸಿ ಸನಿಹ ದಟ್ಟ ಕಾಡು ಮಾರ್ಗವಾಗಿ ಪಲಾಯನಗೈದಿದ್ದಾನೆ. ಎಕಾಏಕಿಯಾಗಿ ದಾಳಿ ಮಾಡಿದ ಸಂದರ್ಭದಲ್ಲಿ ಹೊಡೆಯಲಾಗದೇ ದಿಗ್ಧಮೆಗೊಂಡ ಮಹಿಳೆ ಸುಧಾರಿಸಿ, ಆಸುಪಾಸಿನ ಮನೆಯವರಿಗೆ ಘಟನೆಯ ಬಗ್ಗೆ ವಿವರಿಸಿದರು. ಸ್ಥಳೀಯರು ಹುಡುಕಾಟ ನಡೆಸಿದರೂ ಅಷ್ಟರಲ್ಲಿ ಆತ ಪರಾರಿಯಾಗಿದ್ದನು.






