ಸಾಮಾಜಿಕ

ಕೇವಲ 500 ರೂಪಾಯಿ ನೋಟು ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ ಅಮಾನತು 

Views: 129

ಕನ್ನಡ ಕರಾವಳಿ ಸುದ್ದಿ: ಕೇವಲ 500 ರೂಪಾಯಿ ನೋಟು ಕಳೆದುಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಯ ಅವಧಿಯಲ್ಲಿ ಶಿಕ್ಷಕಿಯ 500 ರೂಪಾಯಿ ನೋಟು ಕಾಣೆಯಾಗಿತ್ತು. ಶಾಲೆಯ ವಿದ್ಯಾರ್ಥಿನಿಯರೇ ಅದನ್ನು ಕದ್ದಿದ್ದಾರೆ ಎಂದು ಬಲವಾಗಿ ಶಂಕಿಸಿದ ಶಿಕ್ಷಕಿ, ತರಗತಿಯಲ್ಲಿದ್ದ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬಟ್ಟೆ ಬಿಚ್ಚುವಂತೆ ಆದೇಶಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಶಿಕ್ಷಕಿ, “ಯಾರಿಗೆ ಬಟ್ಟೆ ಬಿಚ್ಚಲು ಇಷ್ಟವಿಲ್ಲವೋ, ಅವರು ನನಗೆ 500 ರೂಪಾಯಿ ಕೊಟ್ಟು ಇಲ್ಲಿಂದ ಮನೆಗೆ ಹೋಗಬಹುದು” ಎಂದು ವಿದ್ಯಾರ್ಥಿನಿಯರಿಗೆ ಧಮ್ಕಿ ಹಾಕಿದ್ದಾರೆ.

ಶಿಕ್ಷಕಿಯ ಈ ವಿಕೃತ ಆದೇಶದಿಂದ ತೀವ್ರ ಮುಜುಗರ ಹಾಗೂ ಮಾನಸಿಕ ಆಘಾತಕ್ಕೊಳಗಾದ ವಿದ್ಯಾರ್ಥಿನಿಯರು ಅಳುತ್ತಲೇ ಮನೆಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳ ಆತ್ಮಗೌರವಕ್ಕೆ ಧಕ್ಕೆ ತಂದ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿ, ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಜಾರಿಗೆ ಬರುವಂತೆ ಆ ವಿಕೃತ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಮಕ್ಕಳ ರಕ್ಷಣೆ ಮತ್ತು ಘಟನೆಯ ಕುರಿತು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ಮುಂದುವರಿದಿದೆ.

Related Articles

Back to top button
error: Content is protected !!