ಕೆಎಸ್‌ಆರ್‌ಟಿಸಿ ಬಸ್‌ಗಳ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ
Views: 35
ಕನ್ನಡ ಕರಾವಳಿ ಸುದ್ದಿ: ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 16ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಭೀಕರ ಘಟನೆ ರಾತ್ರಿ ನಡೆದಿದೆ. ಯಲ್ಲಾಪುರ ತಾಲೂಕಿನ ಶಿಡ್ಲಗುಂಡಿ ಹಾಗೂ ಮುಂಡಗೋಡ ತಾಲೂಕಿನ ಮೈನಳ್ಳಿ ನಡುವೆ ಇರುವ ಸಣ್ಣ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.
ಬೆಂಗಳೂರಿನಿಂದ ಮುಂಡಗೋಡ ಮಾರ್ಗವಾಗಿ ಯಲ್ಲಾಪುರದತ್ತ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ತೆರಳುತ್ತಿದ್ದ ಮತ್ತೊಂದು ಸಾರಿಗೆ ಬಸ್ ನಡುವೆ ಈ ದುರಂತ ನಡೆದಿದೆ.
ಅಪಘಾತದ ತೀವ್ರತೆಗೆ ಯಲ್ಲಾಪುರದತ್ತ ಬರುತ್ತಿದ್ದ ಬಸ್‌ನ ಮುಂಭಾಗ ಅಪ್ಪಚ್ಚಿಯಾಗಿದ್ದು, ಬಸ್ ಚಾಲಕ ಸ್ಟೇರಿಂಗ್ ಮತ್ತು ಸೀಟಿನ ನಡುವೆ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಬಸ್‌ನ ಕಬ್ಬಿಣದ ಭಾಗಗಳು ಜಖಂಗೊಂಡಿದ್ದರಿಂದ ಚಾಲಕನನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ಕರೆಯಿಸಿ, ಅದರ ನೆರವಿನಿಂದ ಬಸ್‌ನ ಮುಂಭಾಗವನ್ನು ಸೀಳಿ ಚಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು.
ಗಾಯಗೊಂಡ ಎಲ್ಲ 16 ಪ್ರಯಾಣಿಕರನ್ನು ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ, ಇವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.






