ದಲಿತ ಸಮುದಾಯಕ್ಕೆ ಅವಮಾನ: ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

Views: 0
ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಕ್ಕೆ ನಟ ಉಪೇಂದ್ರ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಉಪೇಂದ್ರ ಫೇಸ್ಬುಕ್ ವಿಡಿಯೋ ಸಂದೇಶದಲ್ಲಿ ಮಾತನಾಡುತ್ತಾ ‘ಊರು ಅಂದರೆ ಹೊಲಗೇರಿ ಇರುತ್ತೆ’ ಎಂದು ಗಾದೆ ಮಾತನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ಉಪೇಂದ್ರ ಅವರ ವಿರುದ್ಧ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂದನ್ ಡಿ ಅವರು ದೂರು ನೀಡಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿಡಿಯೋ ಸಂದೇಶದಲ್ಲಿ ಮಾತನಾಡುವಾಗ ಗಾದೆ ಮಾತನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಆಕ್ರೋಶ ಕೇಳಿಬಂದಿತ್ತು.
ಕರ್ನಾಟಕ ರಾಜ್ಯ ಭೀಮ್ ಆರ್ಮಿ ಅಧ್ಯಕ್ಷರಾದ ರಾಜಗೋಪಾಲ್ ಡಿ ಅವರು ಪ್ರತಿಕ್ರಿಯಿಸಿ ಉಪೇಂದ್ರ ಅವರೇ.. ‘ಊರು ಎಂದರೆ ಹೊಲಗೇರಿ ಇರುತ್ತೆ ‘ಎಂದು ಹೇಳುವುದರ ಮೂಲಕ ನೀವು ದಲಿತರನ್ನು ಅಪಮಾನಿಸುತ್ತಾ ಇದ್ದೀರಿ.. ಕೂಡಲೇ ನಿಮ್ಮ ಹೇಳಿಕೆ ವಾಪಸ್ ಪಡೆದುಕೊಳ್ಳಬೇಕು.ಮತ್ತೆ ದಲಿತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳಿಂದ ಹೋರಾಟ ಮಾಡಬೇಕಾಗುತ್ತದೆ. ಮತ್ತೆ ದೌರ್ಜನ್ಯ ಕಾಯ್ದೆ ಅಡಿ ನಿಮ್ಮ ಮೇಲೆ ಕೇಸು ದಾಖಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಉಪೇಂದ್ರ ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮಾಪಣೆಯನ್ನು ಕೇಳಿದ್ದು, ಬಾಯಿ ತಪ್ಪಿನಿಂದ ಗಾದೆ ಮಾತು ಬಂದಿದೆ ಇದರಿಂದ ಹಲವರ ಭಾವನೆಗಳು ಧಕ್ಕೆಯಾಗಿರುದನ್ನು ಗಮನಿಸಿ ತಕ್ಷಣ ಲೈವ್ ವಿಡಿಯೋ ವನ್ನು ಡಿಲೀಟ್ ಮಾಡಿದ್ದೇನೆ. ಮಾತಿಗೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.






