7ನೇ ತರಗತಿ ಪ್ರವೇಶಕ್ಕೆ 20 ಸಾವಿರ ರೂ. ಲಂಚ ಬೇಡಿಕೆ: ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ
Views: 39
ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 7ನೇ ತರಗತಿಗೆ ಪ್ರವೇಶ ನೀಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 10 ಸಾವಿರ ಪಡೆಯುತ್ತಿದ್ದಾಗ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಮ್ಮ ಮಗಳನ್ನು ಭದ್ರಾವತಿ ತಾಲೂಕಿನ ಕೆ.ಹುಣಸೆಕಟ್ಟೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸೇರಿಸುವ ಉದ್ದೇಶದಿಂದ ಪ್ರಾಂಶುಪಾಲರನ್ನು ಭೇಟಿ ಮಾಡಿದಾಗ ಪ್ರವೇಶಾತಿ ನೀಡಲು 20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಭದ್ರಾವತಿ ತಾಲೂಕು ತಿಪ್ಲಾಪುರ ಕ್ಯಾಂಪ್ನ ನಿವಾಸಿ ಮೇಘರಾಜ್ ಎಂಬವರು ಜು.18ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಂದು ಕಚೇರಿಯಲ್ಲಿಯೇ ಮೇಘರಾಜ್ ಅವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಎಂ.ಎಸ್.ಕೌಶಲಪುರೆ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಇನ್ಸ್ಪೆಕ್ಟರ್ ರುದ್ರೇಶ್ ಹಾಗೂ ವೀರಬಸಪ್ಪ ಎಲ್.ಕೌಸಲಾಪುರೆ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.






