ಬ್ರಹ್ಮಾವರ ಎಸ್‌ಎಂಎಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭ
Views: 117
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಎಸ್‌ಎಂಎಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಉದ್ಘಾಟನಾ ಸಮಾರಂಭ ಸೆ.10ರಂದು ನಡೆಯಿತು.
2026-2027ನೇ ಸಾಲಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ನಿಕಟಪೂರ್ವ ಪ್ರಾಂಶುಪಾಲ ಮತ್ತು ರಾಜಕೀಯ ಶಾಸ್ತ್ರ ಉಪನ್ಯಾಸಕರಾದ ಸುಧಾಕರ ವಕ್ವಾಡಿ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆಯನ್ನು ಆದರ್ಶ ಪ್ರಜೆಗಳನ್ನಾಗಿಸಿಕೊಳ್ಳಲು ಶಿಕ್ಷಕ ಮತ್ತು ವಿದ್ಯಾರ್ಥಿಯ ಸಂಬಂಧದ ಜೊತೆಗೆ ಸಮುದಾಯದ ಸಮಸ್ಯೆಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವ, ಸಹಕಾರ ಮತ್ತು ನಾಗರಿಕ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಉತ್ತಮ ವೇದಿಕೆಯಾಗಿದೆ ಎಂದರು.
ಎಸ್ಎಮ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ಸಾಮಾಜಿಕ ಅರಿವು, ಮಾನವೀಯ ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜದ ಒಳಿತಿಗಾಗಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಪ್ರಕಾಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎನ್‌ಎಸ್‌ಎಸ್ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಪಾತ್ರದ ಕುರಿತು ವಿವರಿಸಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀ ಡಾ. ಮಂಜುನಾಥ್ ಉಡುಪ, ಸಹ ಯೋಜನಾಧಿಕಾರಿ ಶ್ರೀಮತಿ ನಕ್ಷಿತಾ, ಎನ್ಎಸ್ಎಸ್ ಘಟಕಗಳ ವಿದ್ಯಾರ್ಥಿ ನಾಯಕರುಗಳಾದ ರತಿಕ್, ಸಂಕೇತ್, ನವಮಿ ತುಳಸಿ, ಕೀರ್ತನ್ ಉಪಸ್ಥಿತರಿದ್ದರು.
ದ್ವಿತೀಯ ಬಿಸಿಎ ವಿದ್ಯಾರ್ಥಿ ರತಿಕ್ ಅವರ ನೇತೃತ್ವದಲ್ಲಿ ಸ್ವಯಂಸೇವಕರು ಎನ್‌ಎಸ್‌ಎಸ್ ಪ್ರತಿಜ್ಞೆ ಸ್ವೀಕರಿಸಿದರು.ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣಗಳು ಹಾಗೂ ರಾಷ್ಟ್ರ ಸೇವೆಯ ಬದ್ಧತೆಯನ್ನು ಬೆಳೆಸುವ ಸಾರ್ಥಕ ಪ್ರಯತ್ನವಾಗಿ ಯಶಸ್ವಿಯಾಗಿ ನೆರವೇರಿತು.
ದ್ವಿತೀಯ ಬಿಸಿಎ ವಿದ್ಯಾರ್ಥಿ ಸಂಕೇತ್ ಸ್ವಾಗತಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ಕೀರ್ತನಾ ವಂದಿಸಿದರು.










