ಇತರೆ

ರೀಲ್ಸ್ ನೋಡುವ ವಿಚಾರಕ್ಕೆ ಜಗಳ:ಪತ್ನಿಯನ್ನು ಕೊಂದ ಪತಿ ಆತ್ಮಹತ್ಯೆ

Views: 35

ಕನ್ನಡ ಕರಾವಳಿ ಸುದ್ದಿ: ಪತ್ನಿ ರೀಲ್ಸ್ ನೋಡುತ್ತಾಳೆ ಎನ್ನುವ ವಿಚಾರಕ್ಕೆ 38 ವರ್ಷದ ಪತಿ, ಬಿಯರ್ ಬಾಟಲಿಯಿಂದ ಆಕೆಯ ತಲೆಗೆ ಒಡೆದು ಕೊಂದು, ನಂತರ ಆತನು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.

ವಿಭೂತಿಪುರ ನಿವಾಸಿ ಶ್ರುತಿ (30) ಹತ್ಯೆಗೀಡಾದವಳು. ರಾಘವೇಂದ್ರ (38) ಆತ್ಮಹತ್ಯೆ ಮಾಡಿಕೊಂಡವ. ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ.

ರಾಘವೇಂದ್ರ ಅವರು, 15 ವರ್ಷದ ಹಿಂದೆ ದಾವಣಗೆರೆ ಮೂಲದ ಶ್ರುತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಇಬ್ಬರು ಬೆಂಗಳೂರಿನ . ವಿಭೂತಿಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಕ್ಕಳನ್ನು ದಾವಣಗೆರೆಯ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು.

ರಾಘವೇಂದ್ರ ಜೀವನೋಪಾಯಕ್ಕಾಗಿ ಆಟೋರಿಕ್ಷಾ ಓಡಿಸುತ್ತಿದ್ದರು. ಅದರಿಂದ ಬಂದ ಹಣದಲ್ಲಿಯೇ ಜೀವನ ನಡೆಸುತ್ತಿದ್ದರು. ಶ್ರುತಿ ಸಹ ಮನೆಯಲ್ಲಿ ಇರುತ್ತಿರಲಿಲ್ಲ. ಹತ್ತಿರದಲ್ಲಿಯೇ ಇದ್ದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಾ ಇಬ್ಬರು ಜೀವನ ಸಾಗಿಸುತ್ತಿದ್ದರು.

ಶ್ರುತಿಗೆ ರೀಲ್ಸ್ ವೀಕ್ಷಿಸುವ ಅಭ್ಯಾಸವಿತ್ತು. ಇದೇ ವಿಚಾರ ವಾಗಿ ರಾಘವೇಂದ್ರ ನಡುವೆ ಆಗಾಗ್ಗೆ ಜಗಳ ಆಗುತ್ತಿತ್ತು. ಸಮಯ ಕೊಡುತ್ತಿಲ್ಲ ಎಂದು ಆತ ಆಕೆಯ ಮೇಲೆ ದೂರುತ್ತಿದ್ದ. ಈ ವಿಚಾರ ದೊಡ್ಡ ಮಟ್ಟಕ್ಕೆ ವಾಗ್ವಾದಕ್ಕೇರಿತ್ತು. ಮಂಗಳವಾರ ರಾತ್ರಿಯೂ ಸಹ ರೀಲ್ಸ್ ವೀಕ್ಷಿಸುವ ವಿಚಾರಕ್ಕೆ ಆಗಿದ್ದ ಜಗಳ ವಿಕೋಪಕ್ಕೆ ತಿರುಗಿದಾಗ ರಾಘವೇಂದ್ರ ಆಕ್ರೋಶಗೊಂಡು ಬಿಯರ್ ಬಾಟಲ್ ಒಡೆದು ಆಕೆಗೆ ಇರಿದಿದ್ದ. ತೀವ್ರ ರಕ್ತಸ್ರಾವ ದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಪತ್ನಿಯನ್ನು ಕೊಂದ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

‘ಬುಧವಾರ ಬೆಳಿಗ್ಗೆ 6.30 ರ ಸುಮಾರಿಗೆ ಮನೆಯಲ್ಲಿ ಎರಡು ಶವಗಳು ಪತ್ತೆಯಾಗಿವೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ದಂಪತಿಗಳ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ರಾಘವೇಂದ್ರ ಮದ್ಯದ ಚಟ ಹೊಂದಿದ್ದನು ಮತ್ತು ತನ್ನ ಗಳಿಕೆಯ ಬಹುಪಾಲು ಹಣವನ್ನು ಅದಕ್ಕಾಗಿ ಖರ್ಚು ಮಾಡುತ್ತಿದ್ದನು. ಘಟನೆಗೆ ಕಾರಣವೇನೆಂದು ತಿಳಿಯಲು ನಾವು ಕುಟುಂಬ ಸದಸ್ಯರು ಮತ್ತು ಸಂಬಂಧಿಕರನ್ನು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ವೈಟ್ ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ಮತ್ತು ಎಚ್‌ಎಎಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!