ಪರೀಕ್ಷಾ ಭಯದಿಂದ ನಾಪತ್ತೆಯಾದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು 8 ತಿಂಗಳ ನಂತರ ಪತ್ತೆ..ಒಬ್ಬಳು ಗರ್ಭಿಣಿ!
Views: 224
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಕೊನೆಗೂ 8 ತಿಂಗಳ ಬಳಿಕ ಪತ್ತೆಯಾಗಿದ್ದಾರೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ (CID) ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವತಿಯರನ್ನು ಪತ್ತೆಹಚ್ಚಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಕಳೆದ ಜನವರಿ 31 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ವಿದ್ಯಾರಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ಪೊಲೀಸರು ಶೋಧ ಆರಂಭಿಸಿದರೂ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ನಂತರ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಗಂಭೀರತೆ ಅರಿತ ಹೈಕೋರ್ಟ್, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.
ಸ್ಥಳೀಯ ಪೊಲೀಸರ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜೊತೆ ಇವರು ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದಾದ ನಂತರ ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆಟ್ಟದ ಆವರಣದಲ್ಲೇ ಇವರಿಗೆ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿತ್ತು.
ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿದ್ದ ತನಿಷ್ಕಾ, “ನಾವಿಬ್ಬರೂ ಅಕ್ಕ-ತಂಗಿ, ನಮಗೆ ತಂದೆ-ತಾಯಿ ಯಾರೂ ಇಲ್ಲ, ಅನಾಥರು” ಎಂದು ಯುವಕನಿಗೆ ಸುಳ್ಳು ಹೇಳಿದ್ದಳು. ಯುವತಿಯರ ಮಾತು ನಂಬಿದ ಆ ಯುವಕ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದನು.
ಬಳಿಕ ಆ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಮನೆಯಲ್ಲೇ ಜೊತೆಯಲ್ಲಿಟ್ಟುಕೊಂಡಿದ್ದರು. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ನಿಗಾ ಇರಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು.
ಆಧಾರ್ ಮಾಹಿತಿ ಹಾಗೂ ನೆಟ್‌ವರ್ಕ್ ಸ್ಥಳವನ್ನು ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಯುವತಿಯರು ಇರುವ ಜಾಗವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಪ್ರಸ್ತುತ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರನ್ನೂ ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.






