ಪದವಿ ಪರೀಕ್ಷೆಯಲ್ಲಿ ಫೇಲಾಗಿದ್ದ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆ
Views: 123
ಕನ್ನಡ ಕರಾವಳಿ ಸುದ್ದಿ: ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ಶಿಕಾರಿಪುರದ ಬಸವ ಆಶ್ರಮ ಹಿಂಭಾಗದ ನಿವಾಸಿ ರೇಣುಕಮ್ಮ ಮತ್ತು ಮಾಲತೇಶ ಅವರ 20 ವರ್ಷದ ಪುತ್ರಿ ನಮಿತಾ ಮೃತಪಟ್ಟ ದುರ್ದೈವಿ.
ಈಕೆ ಶಿಕಾರಿಪುರ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2ನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು.
ಇತ್ತೀಚೆಗೆ ಪ್ರಕಟವಾದ ಬಿಸಿಎ. 2ನೇ ಸೆಮಿಸ್ಟರ್ ಫಲಿತಾಂಶದಲ್ಲಿ ನಮಿತಾ ‘ಜಾವಾ ಪ್ರೋಗ್ರಾಮಿಂಗ್’ ವಿಷಯದಲ್ಲಿ ಫೇಲಾಗಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಆಕೆ, ಬುಧವಾರ ಬೆಳಿಗ್ಗೆ 9:00 ಗಂಟೆಗೆ ಮನೆಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ತೆರಳಿದ್ದರು.ಆದರೆ ಬೆಳಿಗ್ಗೆ 11:30 ರ ಸುಮಾರಿಗೆ ಕಾಲೇಜಿಗೆ ಆಕೆ ಬಂದಿಲ್ಲವೆಂದು ಗೆಳತಿಯರು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಶಿಕಾರಿಪುರದ ಹುಚ್ಚರಾಯಸ್ವಾಮಿ ಪಾರ್ಕ್ ಬಳಿಯ ಕೆರೆಯ ದಂಡೆಯಲ್ಲಿ ನಮಿತಾ ಸ್ಕೂಟಿ ಹಾಗೂ ಬ್ಯಾಗ್ ಪತ್ತೆಯಾಗಿದೆ. ತಕ್ಷಣ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಕೆರೆಯಿಂದ ವಿದ್ಯಾರ್ಥಿನಿಯ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಮೃತರ ತಾಯಿ ರೇಣುಕಮ್ಮ ಅವರು ನೀಡಿದ ದೂರಿನನ್ವಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






