ಜನಮನ

‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಬಾಡಿಗೆದಾರರಿಗೆ ಬೆಸ್ಕಾಂ ಸ್ಪಷ್ಟನೆ ಏನು?

Views: 182

ಕನ್ನಡ ಕರಾವಳಿ ಸುದ್ದಿ: ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಜುಲೈ 1, 2026 ರಿಂದ ಆರಂಭಗೊಂಡಿದ್ದು, ಬಾಡಿಗೆದಾರರು ಆಧಾರ್ ಮಾಹಿತಿ ಅಪ್ಡೇಟ್ ಕುರಿತು ಗೊಂದಲ ಪಡಬೇಕಾಗಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುವುದು, ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.

ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.

ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ಕಾರ್ಡ್ ಮತ್ತು ವಿವರಗಳನ್ನು ತೆಗೆದುಹಾಕಿ, ಹೊಸ ಬಾಡಿಗೆದಾರರ ಆಧಾರ್ ಸಂಖ್ಯೆ ನಮೂದು ಮಾಡಿಕೊಳ್ಳಲಾಗುವುದು. ಹೀಗಾಗಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ನಿಲ್ಲುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆಯ ಸಮಯದಲ್ಲಿ ನಿಮ್ಮ ಆಧಾರ್ ಮತ್ತು ಬಾಡಿಗೆ/ ಲೀಸ್ ಕರಾರು ವಿವರಗಳನ್ನು ಅಪ್‌ಡೇಟ್ ಮಾಡಲಿದ್ದಾರೆ.

ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದ್ದರಿಂದ ಬಾಡಿಗೆದಾರರು ಯಾವುದೇ ಆತಂಕವಿಲ್ಲದೆ ಬೆಸ್ಕಾಂ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕಾಗಿ ವಿನಂತಿ. ಜೊತೆಗೆ ಮನೆ ಮಾಲೀಕರು ಕೂಡ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕಾಗಿ ಕೋರಲಾಗಿದೆ.

 

Related Articles

Back to top button
error: Content is protected !!