ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಶಾಸಕರ ಅಡ್ಡ ಮತದಾನ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ತಪ್ಪು ಕಾಣಿಕೆ ಸಮರ್ಪಣೆ
Views: 44
ಕನ್ನಡ ಕರಾವಳಿ ಸುದ್ದಿ: ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಶಾಸಕರ ಅಡ್ಡ ಮತದಾನ ವಿವಾದ ಪಕ್ಷದಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. ಇನ್ನು ಕೆಲವು ಶಾಸಕರು ಮಾಡಿದ ತಪ್ಪಿನಿಂದಾಗಿ ಸದ್ಯ ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಗೊಂದಲ ಉಂಟುಮಾಡಿದೆ. ಅಂತೂ ಧರ್ಮಸ್ಥಳ ಆಣೆ ಪ್ರಮಾಣಕ್ಕೆ ತಲುಪಿದ್ದ ಅಡ್ಡ ಮತದಾನದ ಚರ್ಚೆ ಕೊನೆಗೂ ಹಿರಿಯ ನಾಯಕರ ವಿರೋಧದಿಂದ, ಹೈಕಮಾಂಡ್ ಸಭೆಯಿಂದಾಗಿ ನಿಂತಲ್ಲೇ ನಿಂತಿದೆ. ಆದರೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು, ತಪ್ಪು ಕಾಣಿಕೆ ಅರ್ಪಿಸಿದ್ದಾರೆ.
ಸಾಮಾನ್ಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದಲೂ ರೂಢಿಯಲ್ಲಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ತಪ್ಪು ಕಾಣಿಕೆ ಸಲ್ಲಿಕೆ ಮಾಡಿದ್ದು, ರಾಜ್ಯದ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರಾವಳಿ ಶಾಸಕರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದಿದ್ದು, ಶ್ರೀ ಮಂಜುನಾಥನಿಗೆ ಪ್ರಾರ್ಥನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ರಾಸ್ ವೋಟಿಂಗ್ ವಿವಾದದ ನಡುವೆಯೇ ಬಿಜೆಪಿ ನಾಯಕರ ಧರ್ಮಸ್ಥಳಕ್ಕೆ ಭೇಟಿ ಭಾರೀ ಅಚ್ಛರಿ ಮೂಡಿಸಿತ್ತು. ಮಂಜುನಾಥನ ದರ್ಶನದ ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಬಿಜೆಪಿ ನಾಯಕರು ಮಾತುಕತೆ ನಡೆಸಿದರು. ಈ ವೇಳೆ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿ ಕರಾವಳಿ ಭಾಗದ ಶಾಸಕರು, ಪಕ್ಷದ ಪ್ರಮುಖರು ಉಪಸ್ಥಿತಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ 1001 ರೂ. ತಪ್ಪು ಕಾಣಿಕೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ತಪ್ಪು ಕಾಣಿಕೆ ಸಲ್ಲಿಕೆ ಮಾಡುವುದು ಎಂದರೆ, ಭಕ್ತರು ತಾವು ಮಾಡಿದ ಯಾವುದೇ ತಪ್ಪು, ಅಪರಾಧ, ಅರಿವಲ್ಲದೇ ಮಾಡಿದ ಅನ್ಯಾಯಗಳಿಗೆ ಅಥವಾ ಸುಖಾ ಸುಮ್ಮನೆ ಆಣೆ ಪ್ರಮಾಣ ವಿಚಾರದಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರೆತ್ತಿದರೆ ಪ್ರಾಯಶ್ಚಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಮುಂದೆ ಬಂದು ಕಾಣಿಕೆ ಅರ್ಪಿಸಿ ಕ್ಷಮೆಯಾಚನೆ ಮಾಡುವುದಾಗಿದೆ.
ಈ ಮೂಲಕ ಭಕ್ತರು ತಮ್ಮ ಮನಸ್ಸಿನ ನೋವನ್ನು, ಮಾಡಿದ ತಪ್ಪನ್ನು ದೇವರ ಮುಂದಿಟ್ಟು ತಮ್ಮಿಂದಾದ ತಪ್ಪಿಗೆ ಪಶ್ಚಾತಾಪ ಪಟ್ಟು ಕ್ಷಮೆ ಕೇಳುವುದಾಗಿದೆ.






