ಅಡ್ಡ ಮತದಾನ ಮಾಡಿದ 5 ಬಿಜೆಪಿ ಶಾಸಕರ ಉಚ್ಛಾಟನೆ ?
Views: 42
ಕನ್ನಡ ಕರಾವಳಿ ಸುದ್ದಿ: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿರುವವರು ಯಾರೆಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ನೀಡಲಾಗಿರುವ ವರದಿಯಲ್ಲಿ ಪಕ್ಷದೊಳಗೆ ಯಾರು ಅಡ್ಡಮತದಾನ ಮಾಡಿದ್ದಾರೆಂಬ ವಿಸ್ತೃತ ವರದಿ ನೀಡಲಾಗಿದೆ.
ಅಡ್ಡಮತದಾನ ಮಾಡಿರುವ ಶಾಸಕರನ್ನು ಪತ್ತೆ ಹಚ್ಚಲು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿ ತುರ್ತಾಗಿ ಮಧ್ಯಂತರ ವರದಿಯನ್ನು ಕೇಂದ್ರದ ವರಿಷ್ಠರಿಗೆ ಕಳುಹಿಸಿದ್ದು, ಇನ್ನು ಕೆಲದಿನಗಳಲ್ಲಿ ಅಂತಿಮವಾದ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಆಧರಿಸಿ ಅಡ್ಡ ಮತದಾನ ಮಾಡಿರುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ಬಹುಮುಖ್ಯವಾಗಿ ಅಡ್ಡಮತದಾನ ನಡೆಸಿದವರಲ್ಲಿ ಬೆಂಗಳೂರಿನ ಓರ್ವರು, ಕಲ್ಯಾಣ ಕರ್ನಾಟಕದ ಇಬ್ಬರು ಹಾಗೂ ಕಿತ್ತೂರು ಕರ್ನಾಟಕದ ಇಬ್ಬರು ಶಾಸಕರ ಮೇಲೆ ಉಚ್ಚಾಟನೆಯ ತೂಗುಗತ್ತಿ ಆವರಿಸಿದೆ. ಇನ್ನು ಬೆಂಗಳೂರು ಮೂಲದ ಓರ್ವ ಹಾಗೂ ಹಳೇ ಮೈಸೂರು ಭಾಗದ ಮತ್ತೊಬ್ಬ ಶಾಸಕರೂ ಅಡ್ಡಮತದಾನ ನಡೆಸಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ ಇಲ್ಲಿನ ಬೆಳವಣಿಗೆಗಳು ಹಾಗೂ ಅಡ್ಡ ಮತದಾನ ನಡೆಸಿದ ಶಾಸಕರ ವಿವರಗಳನ್ನು ರಾಜ್ಯ ಘಟಕವು ತಮ್ಮದೇಯಾದ ಆಂತರಿಕ ಮೂಲಗಳಿಂದ ಸಂಗ್ರಹಿಸಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಪಕ್ಷದಲ್ಲಿದ್ದು ನಮ್ಮ ಅಭ್ಯರ್ಥಿಗೆ ಮತ ಹಾಕುತ್ತೇವೆಂದು ವಾಗ್ದಾನ ಮಾಡಿ ಕೊನೆಕ್ಷಣದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಅಡ್ಡಮತದಾನ ನಡೆಸಿರುವ ಇವರಿಗೆ ನೋಟಿಸ್ ಇಲ್ಲವೇ ಅಮಾನತು ಮಾಡಿದರೆ ಸಾಲದು. ಬದಲಿಗೆ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು. ಮುಲಾಜಿಲ್ಲದೆ ಬೇಲಿ ಜಿಗಿವ ಇಂತಹ ಶಾಸಕರಿಗೆ ಸ್ವಲ್ಪವೂ ಕರುಣೆ ತೋರದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡುವಂತೆ ಮನವಿ ಮಾಡಲಾಗಿದೆ.
ಈ ಹಿಂದೆ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಹಾಗೂ ಬಸನಗೌಡ ಪಾಟೀಲ್ ಯತ್ನಾಳ್, ಅವರನ್ನು ಯಾವ ರೀತಿ ಉಚ್ಚಾಟನೆ ಮಾಡಲಾಗಿತ್ತೋ, ಅದೇ ರೀತಿ ಅಡ್ಡಮತದಾನ ನಡೆಸಿದ ಶಾಸಕರನ್ನು ಪಕ್ಷದಿಂದಲೇ ಹೊರ ಹಾಕಬೇಕೆಂದು ರಾಜ್ಯ ಘಟಕ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿರುವುದಾಗಿ ಮೂಲಗಳು ಖಚಿತಪಡಿಸಿವೆ.






