ಸಮವಸ್ತ್ರ ಕೊಡಿಸುತ್ತೇನೆ ಎಂದು ನಂಬಿಸಿ ಶಾಲೆಯಲ್ಲೇ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ; ಗ್ರಾಮಸ್ಥರಿಂದ ಧರ್ಮದೇಟು
Views: 39
ಕನ್ನಡ ಕರಾವಳಿ ಸುದ್ದಿ: ಶಾಲೆಯಲ್ಲೇ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಾಮುಕ ಶಿಕ್ಷಕ ಹನುಮಂತಪ್ಪ (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.ಆರೋಪಿ ಶಿಕ್ಷಕ ಹನುಮಂತಪ್ಪ, ಶಾಲೆಯ 8ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಗೆ “ನಿನಗೆ ಶಾಲಾ ಸಮವಸ್ತ್ರ ಕೊಡಿಸುತ್ತೇನೆ” ಎಂದು ನಂಬಿಸಿ ಶಾಲೆಯ ಪ್ರತ್ಯೇಕ ಕೋಣೆಯೊಂದಕ್ಕೆ ಕರೆದೊಯ್ದಿದ್ದಾನೆ.ಅಲ್ಲಿ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾನೆ. ಶಿಕ್ಷಕನ ಈ ಅನುಚಿತ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣವೇ ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ್ದಾಳೆ.
ಮಗಳ ಆಕ್ರಂದನ ಕೇಳಿ ಕೆರಳಿದ ಪೋಷಕರು ಹಾಗೂ ಗ್ರಾಮಸ್ಥರು ಒಟ್ಟಾಗಿ ಶಾಲೆಗೆ ದೌಡಾಯಿಸಿದ್ದಾರೆ.ಕಾಮುಕ ಶಿಕ್ಷಕ ಹನುಮಂತಪ್ಪನನ್ನು ಹಿಡಿದು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಶಾಲಾ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಇಟ್ಟಿಗಿ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಾರ್ವಜನಿಕರ ಕೈಯಿಂದ ಶಿಕ್ಷಕನನ್ನು ಬಿಡಿಸಿ, ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸದ್ಯ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ಹನುಮಂತಪ್ಪ ವಿರುದ್ಧ ಕಠಿಣ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.






