ಯುವಜನ

Al ತಂತ್ರಜ್ಞಾನ ಬಳಸಿ ಅಶ್ಲೀಲ ಫೋಟೋ ಎಡಿಟ್ ಮಾಡಿ 30 ಲಕ್ಷಕ್ಕೆ ಬೇಡಿಕೆ: ತೀವ್ರ ನೊಂದ ಯುವತಿ ಆತ್ಮಹತ್ಯೆಗೆ ಯತ್ನ! 

Views: 0

ಕನ್ನಡ ಕರಾವಳಿ ಸುದ್ದಿ: Al ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಯುವತಿಯ ಫೋಟೋಗಳನ್ನು ಎಡಿಟ್ ಮಾಡಿ ₹30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಯುವತಿಯ ಫೋಟೋಗಳನ್ನು AI ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಯುವತಿಯ ಮೊಬೈಲ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಬಳಿಕ ₹30 ಲಕ್ಷ ಹಣ ನೀಡದಿದ್ದರೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವತಿ ಹಣ ನೀಡಲು ನಿರಾಕರಿಸಿದ ಬಳಿಕ, ಆರೋಪಿಗಳು ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು, ಎಡಿಟ್ ಮಾಡಿದ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಯುವತಿಯ ಫೋಟೋ ಜೊತೆಗೆ ಅವಹೇಳನಕಾರಿ ಮಾಹಿತಿಯನ್ನೂ ಪ್ರಕಟಿಸಿ ಮಾನಹಾನಿಗೆ ಯತ್ನಿಸಿರುವ ಆರೋಪವೂ ಕೇಳಿಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರಿನಲ್ಲಿ ಹರಿದಾಡುತ್ತಿದ್ದ ಎಡಿಟೆಡ್ ಫೋಟೋಗಳನ್ನು ಕಂಡ ಯುವತಿ ತೀವ್ರ ಮನನೊಂದು ಆತ್ಮತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಯುವತಿಯ ಪತಿ ಲಕ್ಕವಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾವಿಕೆರೆ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ಎಂಬುವರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್ ಸಂಖ್ಯೆಗಳ ಮಾಹಿತಿಯನ್ನೂ ಪೊಲೀಸರಿಗೆ ಒದಗಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಬೆನ್ನು ಬಿದ್ದದ್ದ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಇಬ್ಬರನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!