ಉಡುಪಿ: ಗ್ರಾಹಕ ಆಯೋಗದ ಆದೇಶ ಉಲ್ಲಂಘನೆ, ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಬಂಧನ
Views: 29
ಕನ್ನಡ ಕರಾವಳಿ ಸುದ್ದಿ: ಗ್ರಾಹಕ ಆಯೋಗದ ಆದೇಶ ಉಲ್ಲಂಘನೆ ಮತ್ತು ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತ ಶೆಣೈ ಅವರ ರಿಯಲ್‌ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದೆ. ಉಡುಪಿ ನಗರದಲ್ಲಿ ಅಮೃತ್ ಶೆಣೈ ಫ್ಲ್ಯಾಟ್ ಗಳನ್ನು ನಿರ್ಮಿಸಿದ್ದು, ಅದರ ಮಾಲಕತ್ವವನ್ನು ವಾರಸುದಾರರಿಗೆ ವರ್ಗಾಯಿಸುವಲ್ಲಿ ವಿಫಲರಾಗಿದ್ದರು ಎಂದು ಹೇಳಲಾಗಿದೆ. ಇದೀಗ ವ್ಯವಹಾರಕ್ಕೆ ಸಂಬಂಧಿಸಿ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು ಫ್ಲ್ಯಾಟ್ ನ ಗ್ರಾಹಕರೊಬ್ಬರು ಈ ಸಂಬಂಧ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲಿ ಬಂದ ಆದೇಶದಂತೆ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಉದ್ಯಮಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಕ್ರಿ ಹೋಲ್ಡರ್ ಸಂತೋಷ್ ಪೈ ಅವರು ಅಮೃತ್ ಶೆಣೈ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮುಂದೆ 2023ರಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಅಪಾರ್ಟ್‌ಮೆಂಟ್‌ನ ಮನೆ ನಂ. 304 ಅನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು, ಇಲ್ಲವಾದಲ್ಲಿ 27.20 ಲಕ್ಷ ಮೊತ್ತವನ್ನು ವಾರ್ಷಿಕ ಶೇ.9 ಬಡ್ಡಿದರದೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು.
ಆದರೆ, ಆಯೋಗದ ಆದೇಶವನ್ನು ಅಮೃತ್ ಶೆಣೈ ಪಾಲಿಸದ ಕಾರಣ ಸಂತೋಷ್ ಪೈ ಅವರು ದಾವೆ ಹೂಡಿದ್ದು, ಪ್ರಕರಣದ ವಿಚಾರಣೆಯಲ್ಲಿ ಆಯೋಗದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಸೆಕ್ಷನ್ 72ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಆಯೋಗ, ಜೂನ್ 24ರಂದು ಅಮೃತ್ ಶೆಣೈ ಅವರಿಗೆ 3 ವರ್ಷಗಳ ಸಾದಾ ಶಿಕೆ ಹಾಗೂ ಒಂದು ಲಕ ರೂ.ದಂಡ ವಿಧಿಸಿತು. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿತ್ತು.
ಇದರೊಂದಿಗೆ ಆರೋಪಿಯನ್ನು ಆಯೋಗದ ಮುಂದೆ ಹಾಜರುಪಡಿಸುವಂತೆ ಬಂಧನ ವಾರಂಟ್ ಜಾರಿಗೊಳಿಸ ಲಾಗಿತ್ತು. ಅದರಂತೆ ಜೂನ್ 25ರಂದು ಅಮೃತ್ ಶೆಣೈ ಅವರನ್ನು ಬಂಧಿಸಿ ಆಯೋಗದ ಮುಂದೆ ಹಾಜರುಪಡಿಸ ಲಾಗಿದ್ದು, ಆಯೋಗವು ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಅವರನ್ನು ಹಿರಿಯಡ್ಕ ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






