ಕೋಟೇಶ್ವರದಲ್ಲಿ 21ನೇ ಕನ್ನಡ ಸಾಹಿತ್ಯ ಸಮ್ಮೇಳ:ಕುಂದಾಪುರದ ಕನ್ನಡಿಗರು ಈ ನಮ್ಮ ಭಾಷೆಯ ಕಂಪನ್ನು ಜಗತ್ತಿನಾದ್ಯಾಂತ ಪಸರಿಸಿದ್ದಾರೆ, ಡಾ| ಎನ್. ಭಾಸ್ಕರ ಆಚಾರ್ಯ ಅಭಿಮತ
Views: 18
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಕೆಪಿಎಸ್ ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕು ಘಟಕದ ವತಿಯಿಂದ ಹಾಗೂ ಕೋಟೇಶ್ವರ ರೋಟರಿ ಕ್ಲಬ್ ಸಹಕಾರದಲ್ಲಿ ‘ಪಯಣ’ ಶೀರ್ಷಿಕೆಯಡಿ, ಡಾ| ಎನ್. ಭಾಸ್ಕರ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನ.22ರಂದು ನಡೆಯಿತು.

ಧ್ವಜಾರೋಹಣ, ಕನ್ನಡ ಮಾತೆಯ ಮೆರವಣಿಗೆ ಸಮ್ಮೇಳನದ ಆರಂಭದಲ್ಲಿ ಕೋಟೇಶ್ವರ ಗ್ರಾ.ಪಂ. ಪಿಡಿಒ ಸುನಿಲ್ ರಾಷ್ಟ್ರ ಧ್ವಜಾರೋಹಣ ಹಾಗೂ ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ಪುತ್ರನ್ ಪರಿಷತ್ ಧ್ವಜಾರೋಹಣಗೈದರು. ಅನಂತರ ಕೋಟೇಶ್ವರ ದೇವಸ್ಥಾನದಿಂದ ಕೋಟೇಶ್ವರ ಕೆಪಿಎಸ್ ಶಾಲೆಯವರೆಗೆ ನಡೆದ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆಗೆ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ದೇವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಚಾಲನೆ ನೀಡಿದರು.
ಸಾಹಿತಿ ಡಾ.ಎನ್.ಆರ್.ಭಾಸ್ಕರ್ ಆಚಾರ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ, ಗಂಡು ಮೆಟ್ಟಿನ ನೆಲವಾದ ಕುಂದಾಪುರದ ಕುಂದಗನ್ನಡ ನಮ್ಮ ಕುಂದಾಪ್ರ ಭಾಷಿ ಮುಂಚೂಣಿಗೆ ಬರುತ್ತಿದೆ. ರಾಜ್ಯದ ದೇಶದ ಹೊರದೇಶದ ವಿವಿಧ ನಗರಗಳಲ್ಲಿ ನೆಲೆ ಕಂಡುಕೊಂಡ ಕುಂದಾಪುರದ ಕನ್ನಡಿಗರು ಈ ನಮ್ಮ ಭಾಷೆಯ ಕಂಪನ್ನು ಇಂಪನ್ನು ಜಗತ್ತೀನದ್ಯಾಂತ ಪಸರಿಸುತ್ತಿದ್ದಾರೆ. ಈ ನಮ್ಮ ನೆಲದ ನಮ್ಮ ಜನರು ಆಹಾರೋದ್ಯಮದಲ್ಲಿಯೂ ಕೂಡ ಹೆಸರು ಮಾಡಿದವರಿದ್ದಾರೆ. ಕುಂದಾಪುರ ಭಾಗದ ಬಹಳಷ್ಟು ಹಿರಿಯ ಕಿರಿಯ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಸಿನಿಮಾ ಜಗತ್ತಿನ ಸಾಹಿತ್ಯ ಮತ್ತು ನಟನೆ ಹಾಗೂ ಪತ್ರಿಕೋದ್ಯಮದಲ್ಲಿಯೂ ಕೂಡ ಕುಂದಗನ್ನಡ ಬಹುತೇಕ ಮಂದಿ ಸೇವೆ ನೀಡುತ್ತಿದ್ದಾರೆ ಎಂದರು.
ಸಾಹಿತ್ಯ ಮನುಷ್ಯನ ನಡೆ ನುಡಿಗಳಲ್ಲಿ ಉತ್ತಮ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಳ್ಳೆಯ ಸಾಹಿತ್ಯವನ್ನು ಓದುವ ಹವ್ಯಾಸ ಮನಸ್ಸನ್ನು ನಿಯಂತ್ರಣಕ್ಕೆ ತರಬಲ್ಲದು. ಸಾಹಿತ್ಯವೆಂದರೆ ಬರೀ ಓದು, ಬರಹ ಮಾತ್ರವಲ್ಲ ಅದು ನೈತಿಕ ಜೀವನದ ಮಾರ್ಗದರ್ಶಿಯಿದ್ದಂತೆ. ಇಂದಿನ ಶಿಕ್ಷಣ ವ್ಯವಸ್ಥೆ ಹೆಚ್ಚು ಸ್ವಕೇಂದ್ರಿತವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಲ್ಲ. ಪ್ರತಿಯೊಂದು ಮಗುವಿನಲ್ಲೂ ಆರೋಗ್ಯಕರ ಸ್ಪರ್ಧಾ ಮನೋಭಾವನೆ ಬೆಳೆಯಬೇಕು. ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ಪಠ್ಯದ ಜತೆಗೆ ಪಠೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವನೆ, ಪರಸ್ಪರ ಗೌರವ ಹಾಗೂ ಸಹಬಾಳ್ವೆಯ ಗುಣಗಳು ಬೆಳೆಯಬೇಕು. ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ, ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕು. ಈ ಸಮ್ಮೇಳನವು ಸಾಹಿತ್ಯದ ಬೆಳವಣಿಗೆಯ ಜತೆಗೆ ಇಂತಹ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಪ್ರೇರಣೆಯಾಗಬೇಕು ಎಂದರು. ಪ್ರತೀ ಮಗುವಿಗೂ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ದೊರೆಯಬೇಕು. ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕು. ಅನಂತರ ಉನ್ನತ ಕಲಿಕೆಗೆ ಇಂಗ್ಲಿಷ್, ಐದನೇ ತರಗತಿ ಅನಂತರ ಹಿಂದಿ ಕಲಿಸುವುದು ಅಷ್ಟೇ ಅವಶ್ಯ ಎಂದು ಹೇಳಿದರು.
ಇದೇ ವೇಳೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಕೋಟೇಶ್ವರ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಪ್ರಕಾಶ ಶೆಟ್ಟಿ ಮಾತನಾಡಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟೇಶ್ವರ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ,ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ, ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗಜೇಂದ್ರ ಶೆಟ್ಟಿ ಮೂಡುಗೋಪಾಡಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳಾಡಿದರು. ಸಾಂಸ್ಕೃತಿಕ ಚಿಂತಕ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ಪುತ್ರನ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ಶಿಕ್ಷಕ ನರೇಂದ್ರ ಕುಮಾರ್ ಕೋಟ ವಂದಿಸಿ, ಗಂಗೊಳ್ಳಿಯ ಮಡಿ ವಿಶ್ವನಾಥ ಖಾರ್ವಿ ನಿರ್ವಹಿಸಿದರು. ಕೋಟೇಶ್ವರ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಉದ್ಘಾಟನೆ ಸಮಾರಂಭದ ಅನಂತರ ಸಮ್ಮೇಳನಾಧ್ಯಕ್ಷರ ಅಕ್ಷರ ಪ್ರಪಂಚ, ಕವಿಗೋಷ್ಟಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕುಂದಾಪ್ರ ಕನ್ನಡದ ಸ್ಥಿತಿ-ಗತಿ ಕುರಿತು ವಿಚಾರ ಗೋಷ್ಠಿಗಳು ನಡೆದವು. ಈ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗಿದವು.








