ಭರ್ಜರಿ ಯಶಸ್ಸಿನೊಂದಿಗೆ ಒಟಿಟಿಗೆ ಲಗ್ಗೆಯಿಟ್ಟ ‘ಪ್ರೇಮದ ಊರಲಿ’
Views: 53
ಕನ್ನಡ ಕರಾವಳಿ ಸುದ್ದಿ: ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು, ಬರೋಬ್ಬರಿ 150 ಕೋಟಿ ರೂಪಾಯಿ ಗಳಿಸಿರುವ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಪ್ರೇಮದ ಊರಲಿ’ ಇದೀಗ ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ.
ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿರುವ ಈ ಚಿತ್ರವು ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿತ್ತು.
ಆ ಬೆನ್ನಲ್ಲೇ ‘ಪ್ರೇಮದ ಊರಲಿ’ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೊ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕನ್ನಡದ ಜೊತೆಗೆ ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಈ ಚಿತ್ರವು ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಿದೆ.
ಕಳೆದ ಸೆಪ್ಟೆಂಬರ್ 25ರಂದು ತೆರೆಕಂಡಿದ್ದ ‘ಪ್ರೇಮದ ಊರಲಿ’ ಚಿತ್ರವು ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿತ್ತು. 3 ಕೋಟಿಗೂ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ, 150 ಕೋಟಿ ಗಳಿಕೆ ಮಾಡುವ ಮೂಲಕ ‘ಕೆಜಿಎಫ್’ ಮತ್ತು ‘ಕಾಂತಾರ’ದಂತಹ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಅಲ್ಲದೆ, 2026ರಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ಶ್ರೀರಾಮ್ (ಸಂತೋಷ್) ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ (ರುಕ್ಕಿಣಿ) ಹಾಗೂ ರಮಿಕಾ ಶಿವು (ವಸಂತ) ಅಭಿನಯಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ವೆನಿಲ್ಲಾ ಎಂಟರ್ಟೇನ್ಮೆಂಟ್ಸ್’ ಹಾಗೂ ‘ಜಾನಕಮ್ಮ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ಸುನಾದ್ ಗೌತಮ್ ಸಂಗೀತ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ ಹಾಗೂ ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.






