ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ಸ್ಟಾರ್ ನಟಿ!
Views: 51
ಕನ್ನಡ ಕರಾವಳಿ ಸುದ್ದಿ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಲವ್ ಲೈಫ್ ವಿಚಾರವಾಗಿಯೇ ಆಗಾಗ ಸುದ್ದಿಯಾಗುವ ಈ ನಟಿ, ಇದೀಗ ಮತ್ತೊಮ್ಮೆ ಸಿಂಗಲ್ ಆಗಿರುವುದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ವಿದೇಶಿ ಬಾಯ್ಫ್ರೆಂಡ್ ಜೊತೆಗಿನ ಪ್ರೀತಿಗೆ ಫುಲ್ಸ್ಟಾಪ್ ಇಟ್ಟಿರುವುದನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಪ್ರಸಾರವಾದ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಅನನ್ಯಾ, ಸದ್ಯ ತಾವು ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ಯುವ ಉದ್ಯಮಿ ಅನನ್ಯಾ ಬಿರ್ಲಾ ಜೊತೆ ಅನನ್ಯಾ ಪಾಂಡೆ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ನಿರೂಪಕ ಕರಣ್ ಜೋಹರ್ ಹಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಅನನ್ಯಾ ಪಾಂಡೆಯ ಪ್ರೀತಿ, ಪ್ರೇಮ ಮತ್ತು ಮದುವೆಯ ವಿಚಾರವಾಗಿ ನಡೆದ ಮಾತುಕತೆ ಗಮನ ಸೆಳೆದಿದೆ. ಈ ವೇಳೆ ಮಾತನಾಡಿದ ಅನನ್ಯಾ, ತಾನು ಮತ್ತೆ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸದ್ಯ ಒಂಟಿಯಾಗಿರುವುದನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.
‘ಮತ್ತೊಬ್ಬರನ್ನು ಪ್ರೀತಿಸಿ ನನ್ನ ಜೀವನಕ್ಕೆ ಬರಮಾಡಿಕೊಳ್ಳುವ ಮೊದಲು ನನ್ನನ್ನು ನಾನು ಪ್ರೀತಿಸಬೇಕು. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ’ ಎಂದು ಅನನ್ಯಾ ಹೇಳಿದ್ದಾರೆ. ಈ ಮೂಲಕ ಹೊಸ ಪ್ರೀತಿಗೆ ಸದ್ಯಕ್ಕೆ ಬ್ರೇಕ್ ಹಾಕಿರುವ ಸುಳಿವು ನೀಡಿದ್ದಾರೆ.
ಅಸಲಿಗೆ ಅನನ್ಯಾ ಪಾಂಡೆ ವಿದೇಶಿ ಪ್ರಜೆ ವಾಲ್ಟರ್ ಬ್ಲಾಂಕೊ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಜೋಡಿ ಪರಸ್ಪರ ಡೇಟಿಂಗ್ ಮಾಡುತ್ತಿತ್ತು ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಇತ್ತೀಚೆಗೆ ಇಬ್ಬರೂ ದೂರವಾಗಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅನನ್ಯಾ ನೀಡಿರುವ ಹೇಳಿಕೆ ಬ್ರೇಕಪ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.






