ಶಿಕ್ಷಣ

ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆ: “ಶ್ಲಾಘನ ಶನಯ” ನೂತನ ವಸತಿ ನಿಲಯ ಲೋಕಾರ್ಪಣೆ 

Views: 391

ಕನ್ನಡ ಕರಾಳಿ ಸುದ್ದಿ: ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆ ಪ್ರವರ್ತಿತ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇದರ ನೂತನ ‘ಶ್ಲಾಘನ ಶನಯ’ ಬಾಲಕ ಬಾಲಕಿಯರ ನೂತನ ವಸತಿ ನಿಲಯವನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಜೂನ್ 25ರಂದು ಹೆಮ್ಮಾಡಿ ಸುಳ್ಸೆಯಲ್ಲಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

 ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ ಅವರಲ್ಲಿರುವ ಅತ್ಯುತ್ತಮ ಪ್ರತಿಭೆಯನ್ನು ಸಾಕಾರಗೊಳಿಸಲು ಜನತಾ ಶಿಕ್ಷಣ ಸಂಸ್ಥೆಯ ಗಣೇಶ ಮೊಗವೀರ ಹಾಗೂ ಅವರ ತಂಡದ  ಸಾಧನೆಗೆ ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.

ಮನುಷ್ಯನಿಗಿರುವ ಶ್ರೇಷ್ಠ ಬಲವೆಂದರೆ ಬುದ್ದಿ ಬಲ, ಆ ಬುದ್ದಿಯ ವಿಕಾಸ ಆಗಬೇಕಾದರೆ ವಿದ್ಯೆ ಅವಶ್ಯಕ. ಮಕ್ಕಳ ಪ್ರತಿಭೆ ಹೊರಬಂದು, ಅದರಿಂದ ದೇಶ, ಸಮಾಜ, ರಾಜ್ಯ ಆ ಮಕ್ಕಳಿಗೂ ಉಪಯೋಗ ಆಗುವಂತಾಗಲಿ. ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ವಸತಿ, ಊಟದ ವ್ಯವಸ್ಥೆಗಾಗಿ ಈ ವಸತಿ ಗೃಹ ನಿರ್ಮಿಸಲಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿ ಎಂದು ಶ್ರೀಗಳು ಹರಸಿದರು.

ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ಕಾರ್ಯದರ್ಶಿ ಶ್ಯಾಮಲಾ ಗಣೇಶ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ।ಮೂ। ಲೋಕೇಶ್ ಅಡಿಗ ಬಡಾಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯು ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜಿಲ್ಲಾ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸಂಸ್ಥೆ ಇದೀಗ ಉತ್ತಮ ಪರಿಶ್ರಮದಿಂದ ಅಭಿವೃದ್ಧಿ ಸಾಧಿಸಿದ್ದಾರೆ ಎಂದರು.

ಶಂಕರಾಚಾರ್ಯರ ಕುರಿತು ಜನತಾ ಕಾಲೇಜಿನ ಪಿಯು ವಿದ್ಯಾರ್ಥಿನಿ ಸಿಂಚನಾ ಜಿ. ಭಟ್, ಕಿರಿಮಂಜೇಶ್ವರ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧಿ ಶೆಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ರಶ್ಮಿ ಪೈ ಅವರಿಗೆ ಎರಡು ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು. ಇವರೊಂದಿಗೆ ರ‍್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ವಿಶೇಷವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ವಿವಿಧ ರಂಗದ ಪ್ರಮುಖರು, ಜನತಾ ವಿದ್ಯಾಸಂಸ್ಥೆಗಳ ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ಸ್ವಾಮೀಜಿಯವರನ್ನು ವೈಭವದ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.ಮಾತೆಯವರಿಂದ ಗೀತ ಪ್ರಾರ್ಥನೆ ನಡೆಯಿತು.ವೇದಮೂರ್ತಿ ಗಜೇಂದ್ರ ಹೊಳ್ಳ ಮತ್ತು ಸಂಗಡಿಗರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಉಪನ್ಯಾಸಕ ಉದಯ ನಾಯ್ಕ ಸ್ವಾಗತಿಸಿದರು.ದಾಮೋಧರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

 

.

 

Related Articles

Back to top button
error: Content is protected !!