ರಾಜಕೀಯ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ಪುನರ್‌ರಚನೆ: ರಾಜ್ಯದಿಂದ ಯಾರಿಗೆ ಸಚಿವಗಿರಿ?

Views: 24

ಕನ್ನಡ ಕರಾವಳಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿರುವ ಹಿನ್ನೆಲೆಯಲ್ಲಿ, ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ಸಮಯ ಕೋರಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಮೂಲಗಳ ಪ್ರಕಾರ, ಈ ಬಾರಿ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜೊತೆಗೆ, ಆರು ಮಂದಿ ರಾಜ್ಯ ಖಾತೆ ಸಚಿವರಿಗೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೆ, ಕೆಲ ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸುವ ಕುರಿತು ಸಹ ಚರ್ಚೆಗಳು ನಡೆಯುತ್ತಿವೆ.

ಕೇಂದ್ರ ಸಂಪುಟದಲ್ಲಿ ರಾಜ್ಯದ ಯಾರಿಗೆ ಸಚಿವಗಿರಿ?

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಂದಿನವಾರ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದಿಂದ ಯಾರಿಗೆ ಅವಕಾಶ ಸಿಗಬಹುದು? ಈಗಿರುವವರ ಪೈಕಿ ಯಾರಿಗೆ ಕೊಕ್ ಕೊಡಬಹುದು? ಎಂಬ ಚರ್ಚೆ ಪ್ರಾರಂಭವಾಗಿದೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರಿಗೆ ಅವಕಾಶ ನೀಡಲಾಗುತ್ತದೆ ಎಂಬುದರ ಆಧಾರದ ಮೇಲೆ ರಾಜ್ಯ ಬಿಜೆಪಿ ನಾಯಕತ್ವ ನಿರ್ಧಾರವಾಗಲಿದೆ ಎಂಬುದು ಇದೆಲ್ಲದರ ಮೂಲವಾಗಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಬಹುದು ಎಂದು ಹೇಳಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರೂ ಕೇಂದ್ರ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜತೆಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಬಿ.ವೈ.ರಾಘವೇಂದ್ರ ಅವರ ಹೆಸರುಗಳೂ ಕೇಳಿ ಬಂದಿದೆ. ಆದರೆ, ಇದೆಲ್ಲವೂ ಪಕ್ಷದ ವಲಯದಲ್ಲಿ ಹರಿದಾಡುತ್ತಿರುವ ಹೆಸರುಗಳಾಗಿದ್ದು, ಯಾವುದೇ ಅಧಿಕೃತ ಇಲ್ಲ

ಇನ್ನು ರಾಜ್ಯದಿಂದ ಕೇಂದ್ರ ಸಂಪುಟ ಸೇರುವ ಹಾಗೂ ಕೇಂದ್ರ ಸಂಪುಟದಿಂದ ಕೈ ಬಿಡಲ್ಪಡುವ ವ್ಯಕ್ತಿಗಳ ಆಧಾರದ ಮೇಲೆ ಬಿಜೆಪಿ ರಾಜ್ಯ ಘಟಕದಲ್ಲಿ ಬದಲಾವಣೆ ನಿರ್ಧರಿಸಲ್ಪಡುತ್ತದೆ ಎಂದು ಹೇಳಲಾಗುತ್ತಿದೆ.

Related Articles

Back to top button
error: Content is protected !!