ಬಿಗ್ ಬಾಸ್ ಕನ್ನಡ ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್!
Views: 0
ಕನ್ನಡ ಕರಾವಳಿ ಸುದ್ದಿ: ‘ಬಿಗ್ ಬಾಸ್ ಕನ್ನಡ 13’ ಆರಂಭಕ್ಕೆ ಇನ್ನೂ ಕೆಲ ಸಮಯ ಬಾಕಿ ಇದ್ದರೂ, ಸ್ಪರ್ಧಿಗಳ ಆಯ್ಕೆ ಕುರಿತ ಚರ್ಚೆಗಳು ಈಗಾಗಲೇ ಜೋರಾಗಿವೆ. ಅಧಿಕೃತ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾ ಹಾಗೂ ವೀಕ್ಷಕರ ವಲಯದಲ್ಲಿ ಕೆಲ ಜನಪ್ರಿಯ ಹೆಸರುಗಳು ಹೆಚ್ಚು ಕೇಳಿಬರುತ್ತಿವೆ. ಈ ಬಾರಿ ಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳಿಗೂ ಅವಕಾಶ ಇರುವುದರಿಂದ, ಯಾರು ಮನೆಗೆ ಎಂಟ್ರಿ ಕೊಡಬಹುದು ಎಂಬ ಕುತೂಹಲ ಹೆಚ್ಚಾಗಿದೆ
‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಸುನಂದಾ ಪಾತ್ರದ ಮೂಲಕ ಜನಪ್ರಿಯರಾದ ಹಿರಿಯ ನಟಿ ಸುನೀತಾ ಶೆಟ್ಟಿ, ಬಿಗ್ ಬಾಸ್ ಮನೆಗೆ ಬಂದರೆ ಅನುಭವ ಮತ್ತು ಪ್ರೌಢತೆಯ ಸ್ಪರ್ಶ ನೀಡಬಹುದು ಎಂಬುದು ವೀಕ್ಷಕರ ಅಭಿಪ್ರಾಯ.
‘ಗಟ್ಟಿಮೇಳ’ ಖ್ಯಾತಿಯ ಸಿದ್ದು ಮೂಲಿಮನಿ ತಮ್ಮ ಹಾಸ್ಯಮಯ ವ್ಯಕ್ತಿತ್ವ ಹಾಗೂ ಸರಳ ಸ್ವಭಾವದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಬಿಗ್ ಬಾಸ್‌ಗೆ ಬಂದರೆ ಮನೆಯ ವಾತಾವರಣ ಮತ್ತಷ್ಟು ರಂಗೇರುತ್ತದೆ ಎನ್ನಲಾಗುತ್ತಿದೆ.
‘ಕಾಮಿಡಿ ಕಿಲಾಡಿಗಳು’ ಮೂಲಕ ಮನೆಮಾತಾದ ಶಿವರಾಜ್ ಕೆ.ಆರ್. ಪೇಟೆ ಅವರ ಹಾಸ್ಯಪ್ರಜ್ಞೆ ಹಾಗೂ ಮಿಮಿಕ್ರಿ ಕೌಶಲ್ಯ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯ ರಸದೌತಣ ನೀಡಬಹುದು ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೇರ ಹಾಗೂ ನಿರ್ಭೀತ ಅಭಿಪ್ರಾಯಗಳಿಂದ ಗುರುತಿಸಿಕೊಂಡಿರುವ ಸಂಜನಾ ಜಯಂತ್, ಬಿಗ್ ಬಾಸ್ ಮನೆಗೆ ಕಾಲಿಟ್ಟರೆ ಸಾಕಷ್ಟು ಚರ್ಚೆ ಮತ್ತು ಕುತೂಹಲ ಹುಟ್ಟಿಸಬಹುದು ಎಂದು ವೀಕ್ಷಕರು ಭಾವಿಸಿದ್ದಾರೆ.
‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ರಜನಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ‘ಜೋಡಿ ನಂ.1’ ಕಾರ್ಯಕ್ರಮದಲ್ಲಿ ಪತಿ ಅರುಣ್ ಜೊತೆ ಕಾಣಿಸಿಕೊಳ್ಳುತ್ತಿರುವ ಅವರು, ಬಿಗ್ ಬಾಸ್ ಮನೆಗೆ ಬಂದರೆ ಗಮನ ಸೆಳೆಯಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯ.
ಹಾಸ್ಯ ಮತ್ತು ಮಿಮಿಕ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಿಮಿಕ್ರಿ ಗೋಪಿ, ಈ ಸೀಸನ್‌ನ ಎಂಟರ್‌ಟೇನರ್ ಆಗಿ ಕಾಣಿಸಿಕೊಳ್ಳಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಗೌರಿಶಂಕರ’ ಧಾರಾವಾಹಿ ಮೂಲಕ ಜನಪ್ರಿಯರಾದ ದಿವ್ಯಾ ವಾಗುಕರ್ ಇತ್ತೀಚೆಗೆ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳಬಹುದು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.
ಕಳೆದ ಹಲವು ಸೀಸನ್‌ಗಳಿಂದಲೂ ಕಾಫಿ ನಾಡು ಚಂದು ಅವರ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಲೇ ಇದೆ. ಈ ಬಾರಿ ಆದರೂ ಅವರು ಎಂಟ್ರಿ ಕೊಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ಉತ್ತರ ಕರ್ನಾಟಕದ ಜನಪ್ರಿಯ ಗಾಯಕ ಬಾಳು ಬೆಳಗುಂದಿ ಅವರ ಸರಳತೆ ಮತ್ತು ಗಾಯನ ಪ್ರತಿಭೆ ಬಿಗ್ ಬಾಸ್ ಮನೆಯಲ್ಲಿ ಹೊಸ ಬಣ್ಣ ತುಂಬಬಹುದು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ವಿವಾದಗಳು ಮತ್ತು ಬೋಲ್ಡ್ ವ್ಯಕ್ತಿತ್ವದಿಂದಲೇ ಸುದ್ದಿಯಾಗುವ ಆಶ್ ಮೆಲೊ, ಬಿಗ್ ಬಾಸ್ ಮನೆಗೆ ಬಂದರೆ ಶೋಗೆ ಹೊಸ ಚೈತನ್ಯ ಸಿಗಬಹುದು ಎಂದು ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.






