ಮತ್ತೆ ಶುರುವಾಯ್ತು ರೆಸಾರ್ಟ್ ಪಾಲಿಟಿಕ್ಸ್ : ಜೆಡಿಎಸ್, ಕೈ ಶಾಸಕರು ರೆಸಾರ್ಟ್‌ಗೆ, 7ನೇ ಅಭ್ಯರ್ಥಿ ಗೆಲುವಿನ ಲೆಕ್ಕಾಚಾರ ಏನು?
Views: 9
ಕನ್ನಡ ಕರಾವಳಿ ಸುದ್ದಿ: ವಿಧಾನಪರಿಷತ್ ಚುನಾವಣೆ ಗುರುವಾರ ನಡೆಯಲಿದ್ದು, ಇತ್ತ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆಯನ್ನು ರಂಗೇರಿಸಿದೆ.
ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಮೇಲ್ಮನೆ ಚುನಾವಣೆ ಹಿನ್ನೆಲೆ ಇತ್ತ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್ ಪಕ್ಷ ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಬಿಡದಿಯ ವಂಡರ್ ಲಾ ರೆಸಾರ್ಟ್ನಲ್ಲಿ ಕರೆದಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಇಂದು (ಮಂಗಳವಾರ) ರಾತ್ರಿ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ ಯಾವ ಅಭ್ಯರ್ಥಿಗೆ ಎಷ್ಟು ಮೊದಲ ಪ್ರಾಶಸ್ತ್ಯದ ಮತ ಹಾಕಬೇಕು, ಎರಡನೇ ಪ್ರಾಶಸ್ತ್ಯದ ಮತ ಹಾಕಬೇಕು ಎಂಬ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಗುವುದು.
ಇದರ ಜೊತೆಗೆ ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ ಎಷ್ಟು ಮತ ಹಾಕಬೇಕು. ಯಾವುದೇ ದೋಷವಿಲ್ಲದೆ, ಅಸಿಂಧುವಾಗದಂತೆ ಹೇಗೆ ಮತ ಹಾಕಬೇಕು ಎಂಬುದನ್ನು ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕವೂ ಕೈ ಶಾಸಕರು ರೆಸಾರ್ಟ್ನಲ್ಲೇ ತಂಗಲಿದ್ದಾರೆ. ಜೂನ್ 18ಕ್ಕೆ ಶಾಸಕರು ರೆಸಾರ್ಟ್ನಿಂದ ನೇರವಾಗಿ ಬಸ್ ಮೂಲಕ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾವಣೆ ಮಾಡಲಿದ್ದಾರೆ.
ಇತ್ತ ಜೆಡಿಎಸ್ ಶಾಸಕರೂ ರೆಸಾರ್ಟ್ ವಾಸ್ತವ್ಯ ಮಾಡಲಿದ್ದಾರೆ. ಜೆಡಿಎಸ್ ಗೋವಿಂದ ರಾಜ್ ಅವರನ್ನು ಕಣಕ್ಕಿಳಿಸಿದೆ. ಗೋವಿಂದ ರಾಜ್ ಎನ್ ಡಿಎ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಬಳಿ ಸಂಖ್ಯಾಬಲ ಇಲ್ಲ. ಆದರೆ, ಬಿಜೆಪಿಯ ಉಳಿಕೆ ಮತ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕರ ಮತಗಳ ಮೇಲೆ ಕಣ್ಣಿಟ್ಟಿದೆ. ಇದರ ಜೊತೆಗೆ ತನ್ನ 18 ಶಾಸಕರನ್ನೂ ಒಟ್ಟಾಗಿ ಹಿಡಿದಿಟ್ಟುಕೊಂಡು ತನ್ನ ಅಭ್ಯರ್ಥಿಗೇ ಮತ ಹಾಕಿಸುವ ಸವಾಲು ಜೆಡಿಎಸ್ ಮೇಲಿದೆ.
ಒಂದು ವೇಳೆ ಅಡ್ಡ ಮತದಾನ ಅಥವಾ ಮತದಾನದ ವೇಳೆ ಗೈರಾದರೆ ಜೆಡಿಎಸ್ಗೆ ಅದು ರಾಜಕೀಯವಾಗಿ ಹಿನ್ನಡೆಯಾಗಲಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್ ವಿಫಲವಾಗಿದೆ ಎಂಬ ನಾನಾ ವ್ಯಾಖ್ಯಾನಗಳು ಹುಟ್ಟಿಕೊಳ್ಳಲಿವೆ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿಗೆ ಮೇಲ್ಮನೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕಾಗಿ ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿ ಇರಿಸಲು ಮುಂದಾಗಿದ್ದಾರೆ.
ಪಕ್ಷಗಳ ಸಂಖ್ಯಾ ಬಲ, ಗೆಲುವಿನ ಲೆಕ್ಕಾಚಾರ ಹೇಗಿದೆ? ಕೊನೆ ಕ್ಷಣದ ಬೆಳವಣಿಗೆ ಎಂಬಂತೆ ಜೆಡಿಎಸ್ ಗೊಂವಿಂದ ರಾಜ್ ಅವರನ್ನು ಪರಿಷತ್ನ 7ನೇ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ವಿನಯ್ ಕಾರ್ತಿಕ್ ಅವರನ್ನು 7ನೇ ಸ್ಥಾನಕ್ಕೆ ಕಣಕ್ಕಿಳಿಸಿದೆ. ಹೀಗಾಗಿ 7ನೇ ಸ್ಥಾನಕ್ಕೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಾಂಗ್ರೆಸ್ ಸಂಖ್ಯಾಬಲದ ಆಧಾರದಲ್ಲಿ 4 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಇತ್ತ ಬಿಜೆಪಿ 2 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. 7ನೇ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಮೂವರು ಪಕ್ಷೇತರರು ಹಾಗೂ ಇಬ್ಬರು ಉಚ್ಚಾಟಿತ ಬಿಜೆಪಿ ಶಾಸಕರ ಬೆಂಬಲ ಬೇಕಿದೆ. ಒಂದು ವೇಳೆ ಕಾಂಗ್ರೆಸ್ ತನ್ನ ಮೊದಲ ನಾಲ್ವರು ಅಭ್ಯರ್ಥಿಗಳಿಗೆ 29 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಿದರೆ, ಕಾಂಗ್ರೆಸ್ 5ನೇ ಅಭ್ಯರ್ಥಿಗೆ ಮೂವರು ಪಕ್ಷೇತರ ಹಾಗೂ ಇಬ್ಬರು ಉಚ್ಚಾಟಿತ ಬಿಜೆಪಿ ಶಾಸಕರ ಬೆಂಬಲದ ಮತ ಬಿದ್ದರೂ ಕೊರತೆ ಬೀಳಲಿದೆ. ಆ ವೇಳೆ ಅಡ್ಡ ಮತದಾನ ಆಗುವ ಸಾಧ್ಯತೆ ಇದೆ.
ಇತ್ತ ಜೆಡಿಎಸ್ ಅಭ್ಯರ್ಥಿಗೆ ಮೂರರಿಂದ ಆರೇಳು ಸ್ಥಾನಗಳ ಕೊರತೆ ಬರಲಿದೆ. ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಪ್ರಥಮ ಪ್ರಾಶಸ್ತ್ಯದ ಮತ ಹಾಕಲಿದೆ. ಬಳಿಕ ಬಿಜೆಪಿ ಬಳಿ 4 ಮತಗಳು ಉಳಿಯಲಿವೆ. ಇತ್ತ 18 ಜೆಡಿಎಸ್ ಮತಗಳನ್ನು ಹೊಂದಿದ್ದು, ಜೆಡಿಎಸ್ ಅಭ್ಯರ್ಥಿಗೆ ಮೈತ್ರಿಯ ಸುಮಾರು 22 ಮತಗಳು ಬೀಳಲಿದ್ದು, ಆರು ಮತಗಳು ಕೊರತೆಯಾಗಲಿದೆ. ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ ಬಿದ್ದರೆ 23 ಮತಗಳು ಆಗಲಿವೆ. ಉಳಿದ ಮತಗಳಿಗೆ ಜೆಡಿಎಸ್ ಲೆಕ್ಕಾಚಾರ ಏನು ಎಂಬುದು ಸ್ಪಷ್ಟತೆ ಇಲ್ಲ.
ಪರಿಷತ್ ಅಭ್ಯರ್ಥಿ ಗೆಲ್ಲಲು ಬೇಕಾದ ನಿಗದಿತ ಕೋಟಾ 28 ಮತಗಳಾಗಿವೆ. ಒಬ್ಬ ಅಭ್ಯರ್ಥಿಗೆ ಗೆಲ್ಲಲು 28 ಮತಗಳು ಬೀಳಬೇಕು. ಆದರೆ, ಸಾಮಾನ್ಯವಾಗಿ ಒಂದು ಹೆಚ್ಚವರಿ ಮತವನ್ನು ಹಾಕಲಾಗುತ್ತದೆ. ಆ ಮೂಲಕ 29 ಮತಗಳನ್ನು ಹಾಕಿಸಲಾಗುತ್ತದೆ. ಯಾವ ಅಭ್ಯರ್ಥಿ ಪರ ಎಷ್ಟು ಮತ ಹಾಕಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ.
ಕಾಂಗ್ರೆಸ್ ಶಾಸಕರ ಸಂಖ್ಯಾಬಲ 135. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳಿಗೆ 29 ಮತಗಳನ್ನು ಹಾಕಿಸಿ, ಉಳಿದ ಇಬ್ಬರು ಅಭ್ಯರ್ಥಿಗಳಿಗೆ 28 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸುವ ಸಾಧ್ಯತೆ ಇದೆ. ಅಂಥ ಸನ್ನಿವೇಶದಲ್ಲಿ ತನ್ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ ಮೊದಲ ಪ್ರಾಶಸ್ತ್ಯದ ಮತಗಳು 21 ಉಳಿಯಲಿವೆ. ಉಳಿದಂತೆ ಮೂವರು ಪಕ್ಷೇತರರು ಹಾಗೂ ಇಬ್ಬರು ಬಿಜೆಪಿ ಉಚ್ಚಾಟಿತ ಶಾಸಕರು ಬೆಂಬಲಿಸಿದರೆ 25 ಮತಗಳು ಬೀಳಲಿವೆ. ನಿಗದಿತ ಕೋಟಾ 28 ಮತಕ್ಕೆ 3 ಮತಗಳು ಕೊರತೆಯಾಗಲಿವೆ. ಈ ಮೂರು ಮತಗಳಿಗೆ ಕಾಂಗ್ರೆಸ್ ರಣತಂತ್ರ ಏನಿರಲಿದೆ ಎಂಬುದು ಗೊತ್ತಿಲ್ಲ.
ಈ ವೇಳೆ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಲಾಗುತ್ತದೆ. ಮೊದಲ ಪ್ರಾಶಸ್ತ್ಯದಲ್ಲಿ ಯಾರಿಗೂ ನಿಗದಿತ ಕೋಟಾ ಸಿಗದಿದ್ದಾಗ, ಅತ್ಯಂತ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಯನ್ನು ರದ್ದುಗೊಳಿಸಿ, ಅವರಿಗೆ ಬಿದ್ದ ಮತಗಳಲ್ಲಿರುವ ಎರಡನೇ ಪ್ರಾಶಸ್ತ್ಯದ ಆಯ್ಕೆಯನ್ನು ಇತರೆ ಅಭ್ಯರ್ಥಿಗಳಿಗೆ ಹಂಚಲಾಗುತ್ತದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಐದನೇ ಅಭ್ಯರ್ಥಿ ಗೆಲುವಿಗೆ ಮತ ಲೆಕ್ಕಾಚಾರ ಪೂರಕವಾಗಿದೆ.






