ಡಿ.ಕೆ.ಶಿವಕುಮಾರ್ ಸಂಪುಟ ಸೇರಲಿರುವ ಮೊದಲ ಹಂತದ ಸಂಭಾವ್ಯ ಸಚಿವರು ಯಾರು?
Views: 151
ಕನ್ನಡ ಕರಾವಳಿ ಸುದ್ದಿ: ಡಿಕೆಶಿ ನೂತನ ಸಚಿವ ಸಂಪುಟದಲ್ಲಿ ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿ ಈಗಾಗಲೇ ಹೈಕಮಾಂಡ್ ಕೈಸೇರಿದ್ದು, ಈ ಪೈಕಿ ಕೆಲವರ ಹೆಸರು ಅಂತಿಮವಾಗಿದೆ.
ಮಂತ್ರಿಗಿರಿಗಾಗಿ ಹೊಸಬರು ಹಾಗೂ ಹಳಬರ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಶಾಸಕರು ದೆಹಲಿಗೆ ದಂಡಯಾತ್ರೆ ಆರಂಭಿಸಿದ್ದಾರೆ. ಈ ನಡುವೆ ಮೊದಲ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ 10ರಿಂದ 12 ನಾಯಕರ ಸಂಭಾವ್ಯ ಪಟ್ಟಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯನ್ನು ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವೇಣುಗೋಪಾಲ್ ಪರಿಶೀಲಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಂತಿಮ ಅನುಮೋದನೆಗೆ ರವಾನಿಸಲಿದ್ದಾರೆ.
ಮೊದಲ ಹಂತದ ಸಂಭಾವ್ಯ ಸಚಿವರು ಯಾರು?

ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಬಹುದಾದ ಪ್ರಮುಖ ನಾಯಕರಲ್ಲಿ ಯು.ಟಿ. ಖಾದರ್ ಕರಾವಳಿ ಭಾಗದ ಪ್ರಭಾವಿ ಮತ್ತು ಹಿರಿಯ ನಾಯಕರಾಗಿರುವ ಇವರು ಈ ಹಿಂದೆಯೂ ಸಚಿವರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸತೀಶ್ ಜಾರಕಿಹೊಳಿ ಬೆಳಗಾವಿ ಹಾಗೂ ಕಿತ್ತೂರು ಕರ್ನಾಟಕ ಭಾಗದ ಪ್ರಬಲ ನಾಯಕ. ಪರಿಶಿಷ್ಟ ಪಂಗಡ (ST) ಸಮುದಾಯದ ದೊಡ್ಡ ನಾಯಕರಾಗಿರುವ ಇವರು ಸಂಘಟನಾ ಶಕ್ತಿಯಾಗಿದ್ದು, ಉತ್ತರ ಕರ್ನಾಟಕ ಭಾಗದ ಕೋಟಾದಡಿ ಇವರ ಸೇರ್ಪಡೆ ನಿಶ್ಚಿತ ಎನ್ನಲಾಗಿದೆ. ಡಾ. ಜಿ. ಪರಮೇಶ್ವರ್ ಹಾಲಿ ಗೃಹ ಸಚಿವರೂ ಆಗಿರುವ ಅವರಿಗೆ ಖಾತೆ ಬದಲಾಗುವ ಸಾಧ್ಯತೆ ಇದೆ. ಅಥವಾ ಇರುವ ಗೃಹ ಖಾತೆಯಲ್ಲೇ ಮುಂದುವರಿಯುತ್ತಾರಾ ಎನ್ನುವುದು ನಾಳೆ ತಿಳಿಯಲಿದೆ.

ಪ್ರಿಯಾಂಕ್ ಖರ್ಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿಯೂ ಪ್ರಿಯಾಂಕ್ ಸ್ಥಾನ ಗಿಟ್ಟಿಸಿಕೊಳ್ಳುವುದು ಫಿಕ್ಸ್ ಎನ್ನಲಾಗುತ್ತಿದೆ. ರಾಮಲಿಂಗಾರೆಡ್ಡಿ ಡಿಕೆಶಿ ಟೀಂನಲ್ಲಿ ಗೃಹ ಖಾತೆ ಸಿಗಬಹುದು ಎಂಬ ಚರ್ಚೆಯೂ ಜೋರಾಗಿದೆ.ಯತೀಂದ್ರ ಸಿದ್ದರಾಮಯ್ಯ/ಭೈರತಿ ಸುರೇಶ್ ಹೈಕಮಾಂಡ್ ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಸ್ವತಃ ಡಾ. ಯತೀಂದ್ರ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಒಂದು ವೇಳೆ ಯತೀಂದ್ರ ಮಿಸ್ ಆದರೆ ಭೈರತಿ ಸುರೇಶ್ ಅವರಿಗೆ ಲಕ್ ಖುಲಾಯಿಸಲಿದೆ. ಕೆ.ಜೆ.ಜಾರ್ಜ್ ಪಕ್ಷದ ಹಳೇ ನಿಷ್ಠಾವಂತರು. ಅಲ್ಪಸಂಖ್ಯಾತ (ಕ್ರಿಶ್ಚಿಯನ್) ಕೋಟಾದಡಿ ಇವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈಗಲೂ ಸಚಿವ ಸ್ಥಾನದಲ್ಲಿರುವ ಜಾರ್ಜ್‌ಗೆ ಮುಂದೆ ಯಾವ ಖಾತೆ ಸಿಗಲಿದೆ ಎನ್ನುವ ಕುತೂಹಲವಿದೆ.

ಕೃಷ್ಣ ಬೈರೇಗೌಡ ಕಂದಾಯ ಇಲಾಖೆ ಮೂಲಕ ಹೊಸತನಕ್ಕೆ ನಾಂದಿ ಹಾಡಿರುವ ಇವರಿಗೆ ಸಚಿವ ಸ್ಥಾನ ಮುಂದುವರಿಯುವುದು ಖಚಿತ ಎಂದು ಹೇಳಲಾಗುತ್ತಿದೆ. ಎಂ.ಬಿ.ಪಾಟೀಲ್ ಅಥವಾ ಈಶ್ವರ ಖಂಡ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬ್ಯಾಂಕ್ ಗಟ್ಟಿಯಾಗಿಡಲು ಇವರಲ್ಲಿ ಒಬ್ಬರಿಗೆ ಮೊದಲ ಹಂತದಲ್ಲೇ ಮಂತ್ರಿ ಸ್ಥಾನ ಸಿಗಲಿದೆ.
ಜೂನ್ 3ರಂದು ಸಂಜೆ ರಾಜಭವನದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪ್ರಮಾಣವಚನ ಸಮಾರಂಭದಲ್ಲಿ ಯಾರಿಗೆಲ್ಲಾ ಅದೃಷ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ.






