ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ..ಇನ್ನಿಬ್ಬರು ಡಿಸಿಎಂ ಯಾರು?
Views: 8
ಕನ್ನಡ ಕರಾವಳಿ ಸುದ್ದಿ: ದೆಹಲಿಯಲ್ಲಿ ನೀಟ್ ಕಾವು ದಿನದಿಂದ ದಿನಕ್ಕೆ ಏರುತ್ತಿರುವುದರ ನೇರ ಪರಿಣಾಮ ಕರ್ನಾಟಕದ ಸಂಪುಟ ವಿಸ್ತರಣೆ ಮೇಲೆ ಬೀರಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ನೀಟ್ ಹೋರಾಟದಲ್ಲಿ ತೊಡಗಿಸಿಕೊಂಡಿರುವುದರಿಂದ ‘ತಾತ್ಕಾಲಿಕ’ವಾಗಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಲು ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ಆದರೆ ಸೋಮವಾರವೇ ಜಿರಳೆ ಪಕ್ಷದ ಹೋರಾಟ ತೀವ್ರ ಸ್ವರೂಪ ಪಡೆದು, ಗಲಾಟೆ ಜೋರಾಗಿದ್ದರಿಂದ ಸಿಜೆಪಿಗೆ ಬೆಂಬಲ ಸೂಚಿಸಿ, ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿ, ಬಂಧನಕ್ಕೆ ಒಳಗಾದರು. ಆದ್ದರಿಂದ ಕರ್ನಾಟಕ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸಭೆಯನ್ನು ಮುಂದೂಡಲಾಯಿತು.
ಬುಧವಾರ ಬೆಳಿಗ್ಗೆ ಸಭೆ ನಡೆಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದ್ದರಿಂದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ದೆಹಲಿಯಲ್ಲಿಯೇ ಉಳಿದಿದ್ದರು. ಆದರೆ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸುವ ಆಲೋಚನೆಯಲ್ಲಿ ಹೈಕಮಾಂಡ್ ಇರುವುದರಿಂದ ಸಭೆ ರದ್ದಾಗಿದೆ. ದೆಹಲಿಗೆ ತೆರಳಿದ್ದ ರಾಜ್ಯ ನಾಯಕರು ಸೇರಿದಂತೆ ಸಚಿವಾಕಾಂಕ್ಷಿಗಳು ಹೋದ ದಾರಿಗೆ ಸುಂಕವಿಲ್ಲವೆಂದು ವಾಪಸಾಗಿದ್ದಾರೆ.
ಮತ್ತೆರೆಡು ಡಿಸಿಎಂ ಹುದ್ದೆ ಸೃಷ್ಟಿ?
ಇನ್ನೆರೆಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಚುನಾವಣೆಗೆ ಇನ್ನೆರಡು ವರ್ಷವಿರುವದರಿಂದ ಪ್ರಬಲ ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡಿದರೆ, ಚುನಾವಣೆಯಲ್ಲಿ ಲಾಭವಾಗುತ್ತದೆ ಎನ್ನುವ ವಾದವನ್ನು ಸಿಎಂ ಡಿ.ಕೆ ಶಿವಕುಮಾರ್ ಮಂಡಿಸಿದ್ದಾರೆ. ಒಂದನ್ನು ಲಿಂಗಾಯತ, ಇನ್ನೊಂದು ಅಹಿಂದ ನಾಯಕರಿಗೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ರೇಸ್ ನಲ್ಲಿದ್ದಾರೆ.ಇದೀಗ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಡ ಹೇರಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಯಾವಾಗ ಸಚಿವ ಸಂಪುಟ ವಿಸ್ತರಣೆ?
ಸಂಪುಟ ವಿಸ್ತರಣೆಗೆ ನಿಖರ ದಿನಾಂಕ ಇನ್ನೂ ನಿಗದಿಯಾಗಿಲ್ಲ. ವಿಧಾನಸಭೆಯ ಮುಂಗಾರು ಅಧಿವೇಶನ, ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಹಲವು ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಾಂಕವನ್ನು ನಿರ್ಧರಿಸುವ ಸಾಧ್ಯತೆ ಇದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಹಾಗೂ ಹೊಸ ಡಿಸಿಎಂ ನೇಮಕದ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.






