ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದೆಹಲಿ ಗದ್ದಲ ಅಡ್ಡಿ, ಸಚಿವ ಸ್ಥಾನ ಅಂತಿಮ ಹಂತದ ರೇಸ್‌ನಲ್ಲಿ ಯಾರ್ಯಾರು?
Views: 16
ಕನ್ನಡ ಕರಾವಳಿ ಸುದ್ದಿ: ಬಹುದಿನಗಳ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಇದೀಗ ಮತ್ತೊಂದು ಎಘ್ನ ಎದುರಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಜಿರಳೆ ಪಕ್ಷದ ಹೋರಾಟಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೂಡ ತೀವ್ರ ಹೋರಾಟಕ್ಕಿಳಿದಿರುವುದರಿಂದ, ಸಂಪುಟ ವಿಸ್ತರಣೆ ಬಗ್ಗೆ ಮತ್ತೆ ಅಸ್ಪಷ್ಟತೆ ಉಂಟಾಗಿದೆ. ಲೋಕಭವನದಲ್ಲಿ ಬುಧವಾರ ಸಂಪುಟ ವಿಸ್ತರಣೆಗೆ ಸಿದ್ಧತೆ ನಡೆಸಿಕೊಂಡಿದ್ದರೂ, ಅಂತಿಮ ಕ್ಷಣದಲ್ಲಿ ಇಡೀ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ ದೆಹಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರಯಾಣ ಬೆಳೆಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಂಗಳವಾರ ಸಂಜೆ ವೇಳೆಗೆ ಸ್ಪಷ್ಟನೆ ಸಿಗಬೇಕಿತ್ತು. ನೀಟ್ ಹೋರಾಟದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಇತ್ತ ಕಡೆ ಗಮನಹರಿಸಿಲ್ಲ.
ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ನಡೆಯಲಿಲ್ಲ.
ಈ ಹಿಂದೆ ಸಮಯ ನಿಗದಿಯಾಗಿದ್ದರೂ, ಅಂತಿಮ ಕ್ಷಣದಲ್ಲಿ ನೀಟ್ ಗಲಾಟೆ ಜೋರಾಗಿದ್ದರಿಂದ ಸಂಪುಟ ವಿಸ್ತರಣೆಯ ಇಡೀ ಸಭೆಯನ್ನು ಮುಂದೂಡಲಾಗಿದೆ.
ಯೋಜನೆ ಪ್ರಕಾರ ಮಂಗಳವಾರ ಮಧ್ಯಾ ಹ್ನ 1 ಗಂಟೆಗೆ ಸಿದ್ದರಾಮಯ್ಯ, 1.30ಕ್ಕೆ ಬಿ.ಕೆ. ಹರಿಪ್ರಸಾದ್, 2 ಗಂಟೆಗೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಲು ಸಮಯ ನಿಗದಿಯಾಗಿತ್ತು.
ಆದರೆ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ಕೊನೆ ಕ್ಷಣದಲ್ಲಿ ಸಭೆಯನ್ನು ಎರಡು ಗಂಟೆಗೆ ಮುಂದೂಡಲಾಯಿತು. ಅದಾದ ಬಳಿಕ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಸಭೆಯನ್ನು ರದ್ದುಪಡಿಸಲಾಯಿತು.
ಈ ನಡುವೆ ಶತಾಯಗತಾಯ ಸಚಿವ ಸ್ಥಾನ ಪಡೆಯಲೇಬೇಕು ಎಂದು ಕಾಂಗ್ರೆಸ್ ನ 30ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲೇ
ಮೊಕ್ಕಾಂ ಹೂಡಿದ್ದಾರೆ. ದೆಹಲಿಯಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆ, ಆರ್ ಬಿ.ತಿಮ್ಮಾಪುರ, ಬಸವರಾಜ ರಾಯರಡ್ಡಿ, ರಿಜ್ವಾನ್ ಅರ್ಷದ್, ಡಾ.ಅಜಯ್ ಸಿಂಗ್, ಗೋಪಾಲಕೃಷ್ಣ ಬೇಳೂರು, ಅಶೋಕ ಪಟ್ಟಣ, ಹ್ಯಾರೀಸ್, ಟಿ.ಬಿ.ಜಯಚಂದ್ರ, ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್, ನರೇಂದ್ರಸ್ವಾಮಿ ಅಬ್ಬಯ್ಯ ಪ್ರಸಾದ್, ಅಲ್ಲಂಪ್ರಭು ಪಾಟೀಲ್, ವಿಜಯಾನಂದ ಕಾಶಪ್ಪನವರ, ಎಂ.ವೈ.ಪಾಟೀಲ್, ಸೇರಿ ದಂತೆ ಹಲವು ಶಾಸಕರು ದೆಹಲಿಯಲ್ಲಿ ಇದ್ದು, ಸಚಿವ ಪಟ್ಟಕ್ಕಾಗಿ ಪ್ರಯತ್ನ ನಡೆಸಿದ್ದಾರೆ.
20 ಸ್ಥಾನಗಳಿಗೆ ಹಲವು ಆಕಾಂಕ್ಷಿಗಳು: ಸಚಿವ ಸ್ಥಾನದ ರೇಸ್‌ನಲ್ಲಿ ಜಿಲ್ಲಾವಾರು ಪ್ರಮುಖ ನಾಯಕರ ಹೆಸರು ಮುಂಚೂಣಿಯಲ್ಲಿದೆ. ಕಲ್ಬುರ್ಗಿಯಿಂದ ಅಜಯ್ ಸಿಂಗ್ ಅಥವಾ ಖನಿಜಾ ಫಾತಿಮಾ, ವಿಜಯಪುರದಿಂದ ಅಪ್ಪಾಜಿ ನಾಡ ಗೌಡ ಅಥವಾ ಯಶವಂತ ರಾಯಗೌಡ, ಬಾಗಲಕೋಟೆಯಿಂದ ಕಾಶಪ್ಪನವರ್ ಅಥವಾ ತಿಮ್ಮಾಪೂರ್, ಬೆಳಗಾವಿಯಿಂದ ಲಕ್ಷ್ಮಣ ಸವದಿ, ಅಶೋಕ್ ಪಟ್ಟಣ್ ಹಾಗೂ ಗಣೇಶ್ ಹುಕ್ಕೇರಿ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನು ಧಾರವಾಡದಿಂದ ಸಂತೋಷ್ ಲಾಡ್, ಗದಗದಿಂದ ಎಚ್.ಕೆ. ಪಾಟೀಲ್ ಹಾಗೂ ದಾವಣಗೆರೆಯಿಂದ ಎಸ್.ಎಸ್. ಮಲ್ಲಿಕಾರ್ಜುನ ಚಿತ್ರದುರ್ಗದ ರಘುಮೂರ್ತಿ ಹೆಸರುಗಳು ತೀವ್ರ ಚರ್ಚೆಯಲ್ಲಿವೆ.
ಬೆಂಗಳೂರು ಮತ್ತು ಹಳೆ ಮೈಸೂರು ಭಾಗದಲ್ಲೂ ಸಹ ಬಾರಿ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರಿನಿಂದ ಎಂ. ಕೃಷ್ಣಪ್ಪ, ಆನೇಕಲ್ ಶಿವಣ್ಣ, ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹಮದ್ ಖಾನ್ ಹೆಸರು ಕೇಳಿಬರುತ್ತಿದ್ದರೆ, ರಾಮ ನಗರದಿಂದ ಮಾಗಡಿ ಬಾಲಕೃಷ್ಣ, ಮಂಡ್ಯದಿಂದ ಚೆಲುವರಾಯಸ್ವಾಮಿ, ಮೈಸೂರಿನಿಂದ ತಸ್ವೀರ್ ಸೇಠ್ ಮತ್ತು ಮಹದೇವಪ್ಪ, ಹಾಸನದಿಂದ ಶಿವಲಿಂಗೇಗೌಡ ಹಾಗೂ ಕೊಡಗಿನಿಂದ ಎ.ಎಸ್. ಪೊನ್ನಣ್ಣ ಅವರ ಹೆಸರುಗಳು ಅಂತಿಮ ಹಂತದ ರೇಸ್‌ನಲ್ಲಿವೆ.
ಒಟ್ಟು 20 ಖಾಲಿ ಸ್ಥಾನಗಳಿಗೆ 80ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಸಚಿವರಾಗುವವರ ಅಂತಿಮ ಪಟ್ಟಿಗೆ ರಾಹುಲ್ ಗಾಂಧಿ ಮೊಹರು ಮಾತ್ರ ಬಾಕಿ ಇದೆ. ಈ ಬಾರಿ ಬಹುವಾಗಿ ಹೊಸ ಮುಖಗಳಿಗೇ ಮಣೆ ಹಾಕುವುದು ಖಚಿತವಾಗಿದೆ. ಹಿರಿಯರ ಪೈಕಿ ಒಂದಿಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಉಳಿದಂತೆ ಪ್ರಾದೇಶಿಕವಾರು, ಜಾತಿವಾರು ಲೆಕ್ಕಾಚಾರದೊಂದಿಗೆ ಸಚಿವ ಸ್ಥಾನದ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.






