ಇತರೆ

ಮದುವೆಯಾಗಿ 5 ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು! ನ್ಯಾಯಾಧೀಶ, ವಕೀಲ ಪತಿಯ ವಿರುದ್ಧ ಗಂಭೀರ ಆರೋಪ

Views: 49

ಕನ್ನಡ ಕರಾವಳಿ ಸುದ್ದಿ:  ನೋಯ್ದಾ ಮೂಲದ 33 ವರ್ಷದ ಟ್ವಿಶಾ ಶರ್ಮಾ ಎಂಬ ಯುವತಿಯ ನಿಗೂಢ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮದುವೆಯಾದ ಕೇವಲ ಐದು ತಿಂಗಳಲ್ಲೇ ನವವಿವಾಹಿತೆ ಪ್ರಾಣಬಿಟ್ಟಿದ್ದು, ಹೆತ್ತವರು ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪ ಮಾಡಿದ್ದಾರೆ.

ಏನಿದು ಘಟನೆ?

ನೋಯ್ದಾ ನಿವಾಸಿ ಟ್ವಿಶಾ ಶರ್ಮಾ, ಭೋಪಾಲ್‌ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು 5 ತಿಂಗಳ ಹಿಂದೆ ವಿವಾಹವಾಗಿದ್ದಳು. ಮಂಗಳವಾರ ರಾತ್ರಿ 10:05ಕ್ಕೆ ಟ್ವಿಶಾ ತನ್ನ ತಾಯಿಗೆ ಕರೆ ಮಾಡಿ ತಾನು ಅನುಭವಿಸ್ತಿರುವ ನರಕಯಾತನೆ ಬಗ್ಗೆ ಹೇಳಿಕೊಂಡಿದ್ದಾಳೆ. ಆದರೆ ಪತಿ ಸಮರ್ಥ್ ರೂಮ್ ಒಳಗೆ ಬರುತ್ತಿದ್ದಂತೆ ಕರೆ ಕಟ್ ಮಾಡಿದ್ದಾಳೆ. ಇದಾದ ಕೇವಲ 15 ನಿಮಿಷಗಳಲ್ಲಿ ಟ್ವಿಶಾ ಉಸಿರಾಡುತ್ತಿಲ್ಲ ಎಂಬ ಸುದ್ದಿ ತವರು ಮನೆಗೆ ತಲುಪಿದೆ.

ಟ್ವಿಶಾ ಸಹೋದರ, ಭಾರತೀಯ ಸೇನೆಯ ಮೇಜರ್ ಹರ್ಷಿತ್ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ನನ್ನ ತಂಗಿಯನ್ನು ವರದಕ್ಷಿಣೆಗಾಗಿ ಪೀಡಿಸಲಾಗುತ್ತಿತ್ತು. ಅವಳ ಹೆಸರಿನಲ್ಲಿದ್ದ 20 ಲಕ್ಷ ರೂ. ಮೌಲ್ಯದ ಶೇರ್ ಮತ್ತು ಹೂಡಿಕೆಗಳನ್ನು ಪತಿಯ ಹೆಸರಿಗೆ ವರ್ಗಾಯಿಸಲು ಒತ್ತಡ ಹೇರಲಾಗಿತ್ತು. ಅಷ್ಟೇ ಅಲ್ಲದೆ, ಅವಳು ಗರ್ಭಿಣಿಯಾಗಿದ್ದಾಗ ಮಗುವಿನ ಬಗ್ಗೆ ಇಲ್ಲಸಲ್ಲದ ಶಂಕೆ ವ್ಯಕ್ತಪಡಿಸಿ, ಚಾರಿತ್ರ್ಯ ವಧೆ ಮಾಡಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಟ್ವಿಶಾ ಅವರ ಶವ ಪರೀಕ್ಷೆಯ ವರದಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಹೊರಬಂದಿವೆ. ಟ್ವಿಶಾ ದೇಹದ ಮೇಲೆ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯು ನೇಣಿನಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದರೂ, ಮೃತದೇಹದ ಮೇಲಿನ ಗಾಯಗಳು ಅವಳ ಮೇಲೆ ದೈಹಿಕ ಹಲ್ಲೆ ನಡೆದಿರುವುದನ್ನು ಪುಷ್ಟಿಕರಿಸಿವೆ. ಒಂದು ವಾರದ ಹಿಂದಷ್ಟೇ ಆಕೆಗೆ ಗರ್ಭಪಾತ ಮಾಡಿಸಿರುವುದು ಕೂಡ ವರದಿಯಲ್ಲಿ ದೃಢಪಟ್ಟಿದೆ.

ಟ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ ನಿವೃತ್ತ ನ್ಯಾಯಾಧೀಶರಾಗಿದ್ದು, ಪತಿ ವಕೀಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ಸಂತ್ರಸ್ತ ಕುಟುಂಬ ಆತಂಕ ವ್ಯಕ್ತಪಡಿಸಿದೆ. ಸದ್ಯ ಪೊಲೀಸರು ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ FIR ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!