ಇತರೆ

ಧರ್ಮಸ್ಥಳದಲ್ಲಿ ಪತ್ತೆಯಾದ ಮೂರು ಅಸ್ಥಿಪಂಜರ ಡಿಎನ್ಎ ಪರೀಕ್ಷೆಯಲ್ಲಿ ದೃಢ!

Views: 121

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಅಸ್ಥಿ ಪಂಜರಗಳ ಪೈಕಿ ಮೂರು ಶವಗಳು ಗಂಡಸರದ್ದು ಎಂಬುದು ಎಸ್‌ಐಟಿ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಸಾಬೀತಾಗಿದೆ. ನೇತ್ರಾವತಿ ಸ್ನಾನ ಘಟ್ಟದ ಸಮೀಪ ನೂರಾರು ಮಹಿಳೆಯರ ಅತ್ಯಾಚಾರ, ಕೊಲೆಯಾಗಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಹರಡಲಾಗಿದ್ದ ಆರೋಪಗಳ ಹಿನ್ನೆಲೆಯಲ್ಲಿ ಈ ಬೆಳವ ಣಿಗೆಯು ಮಹತ್ವ ಪಡೆದುಕೊಂಡಿದೆ.

ಚಿನ್ನಯ್ಯ ತೋರಿಸಿದ್ದ 18 ಕಡೆ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ್ದರೂ ಅಸ್ಥಿ ಪಂಜರಗಳು ಸಿಕ್ಕಿರಲಿಲ್ಲ.ಬಳಿಕ ಬಂಗ್ಲೆ ಗುಡ್ಡೆಯ ಅಕ್ಕ ಪಕ್ಕ ಶೋಧ ಕಾರ್ಯಾಚರಣೆ ವೇಳೆ ಏಳು ಅಸ್ಥಿಪಂಜರಗಳು ಹಾಗೂ ಕೆಲವು ಗುರುತಿನ ಚೀಟಿಗಳು ಪತ್ತೆಯಾಗಿದ್ದವು.ಈ ವಿಚಾರ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿ ವಿವಾದ ಸೃಷ್ಟಿಸಿತ್ತು. ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಎಸ್ ಐಟಿ ಅಧಿಕಾರಿಗಳು ಪತ್ತೆಯಾದ ಅಸ್ಥಿಪಂಜರಗಳನ್ನು ಡಿಎನ್ಎ ಪರೀಕ್ಷೆಗಾಗಿ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಎಸ್‌ಐಟಿ ಅಧಿಕಾರಿಗಳು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ತನಿಖಾ ವರದಿಯ ಪ್ರಕಾರ, ಪತ್ತೆಯಾದ ಅಸ್ಥಿಪಂಜರಗಳು ವಿವಿಧ ಜಿಲ್ಲೆಗಳಿಂದ ನಾಪತ್ತೆಯಾಗಿದ್ದ ಪುರುಷರದ್ದೇ ಹೊರತು ಮಹಿಳೆಯರದ್ದಲ್ಲ ಎಂಬುದು ದೃಢಪಟ್ಟಿದೆ. ಈ ಮೂರು ಕುಟುಂಬದವರು ನಿಯಮಾನುಸಾರ ಮನವಿ ಸಲ್ಲಿಸಿದರೆ ತಮ್ಮವರ ಅಸ್ಥಿಪಂಜರಗಳನ್ನು ಪಡೆದುಕೊಳ್ಳಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ.

ಮೃತರನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ನಿವಾಸಿ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ (27) ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ನಿವಾಸಿ ಕೃಷ್ಣಪ್ಪ (85) ಎಂದು ಗುರುತಿಸಲಾಗಿದೆ. ಇವರು 2013ರಿಂದ 2017ರ ಅವಧಿಯಲ್ಲಿ ನಾಪತ್ತೆಯಾಗಿದ್ದರು.

Related Articles

Back to top button
error: Content is protected !!