ಸಾಮಾಜಿಕ

ಮದುವೆಯಾಗಿ ನಾಲ್ಕು ತಿಂಗಳಲ್ಲೇ ಹೆಂಡತಿಗೆ ವಿಷದ ಇಂಜೆಕ್ಷನ್ ನೀಡಿ ಮುಗಿಸಿದ ಪತಿ.. ಅಸಲಿಗೆ ಆಗಿದ್ದೇನು?

Views: 58

ಕನ್ನಡ ಕರಾವಳಿ ಸುದ್ದಿ: ನರ್ಸಿಂಗ್ ಹೋಮ್‌ನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಾ, ಸ್ನೇಹಿತರಾಗಿ, ನಂತರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸುಂದರ ಬದುಕು ಕೇವಲ ನಾಲ್ಕು ತಿಂಗಳಲ್ಲೇ ದುರಂತ ಅಂತ್ಯಗೊಂಡಿದೆ.

ವರದಕ್ಷಿಣೆ ಆಸೆಗೆ ಬಿದ್ದ ರೇಡಿಯಾಲಜಿಸ್ಟ್ ಪತಿಯೊಬ್ಬ ತನ್ನ ನರ್ಸ್ ಪತ್ನಿಗೆ ಇಂಜೆಕ್ಷನ್ ನೀಡಿ ಬರ್ಬರವಾಗಿ ಮುಗಿಸಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಅರುಣ್ ಶರ್ಮಾ ಎಂಬ ರೇಡಿಯಾಲಜಿಸ್ಟ್ ಮತ್ತು ಕಾಜಲ್ ಎಂಬ ನರ್ಸ್ ಗುರುಗ್ರಾಮದ ನರ್ಸಿಂಗ್ ಹೋಮ್ ಒಂದರಲ್ಲಿ ಸಹೋದ್ಯೋಗಿಗಳಾಗಿದ್ದರು. ದೀರ್ಘಕಾಲ ಒಟ್ಟಿಗೆ ಕೆಲಸ ಮಾಡುತ್ತಿದ್ದ ಇವರ ನಡುವೆ ಪ್ರೀತಿ ಚಿಗುರಿತ್ತು. ಮನೆಯವರ ಸಮ್ಮತಿಯೊಂದಿಗೆ ಕಳೆದ ನವೆಂಬರ್‌ನಲ್ಲಿ ಇವರು ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಈ ಪ್ರೇಮ ಕಥೆ ಕಹಿಯಾಗಿ ಬದಲಾಗಿತ್ತು.

ಮದುವೆಯಾದ ಬೆನ್ನಲ್ಲೇ ಅರುಣ್ ತನ್ನ ಪತ್ನಿ ಕಾಜಲ್‌ಗೆ ವರದಕ್ಷಿಣೆಗಾಗಿ ಪೀಡಿಸಲು ಶುರುಮಾಡಿದ್ದ. ಹಣಕ್ಕಾಗಿ ಸಣ್ಣಪುಟ್ಟ ವಿಚಾರಗಳಿಗೂ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಕಾಜಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾರ್ಚ್ 4ರಂದು ಹೋಳಿ ಹಬ್ಬದ ಪ್ರಯುಕ್ತ ಈ ದಂಪತಿ ಗುರುಗ್ರಾಮದ ಗಡಿ ಹರ್ಸಾರು ಎಂಬಲ್ಲಿರುವ ಕಾಜಲ್ ಅವರ ತವರು ಮನೆಗೆ ಬಂದಿದ್ದರು.

ಮಾರ್ಚ್ 17ರಂದು ರಾತ್ರಿ ಮದ್ಯದ ಅಮಲಿನಲ್ಲಿದ್ದ ಅರುಣ್, ಕಾಜಲ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. ಮರುದಿನ ಮುಂಜಾನೆ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಅರುಣ್ ತನ್ನ ವೈದ್ಯಕೀಯ ಜ್ಞಾನವನ್ನು ಕೆಟ್ಟದಾಗಿ ಬಳಸಿ ಕಾಜಲ್‌ಗೆ ವಿಷದ ಇಂಜೆಕ್ಷನ್ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕಾಜಲ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯ ಮೂಗಿನಿಂದ ರಕ್ತ ಬರಲಾರಂಭಿಸಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಕಾಜಲ್ ಮೃತಪಟ್ಟಿದ್ದರು.

ಘಟನಾ ಸ್ಥಳದ ಶೌಚಾಲಯದಲ್ಲಿ ಸಿರಿಂಜ್ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಅನುಮಾನ ಮೂಡಿಸಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಸೆಕ್ಟರ್ 10 ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಅರುಣ್ ಶರ್ಮಾನನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅರುಣ್, ತಾನೇ ವಿಷದ ಇಂಜೆಕ್ಷನ್ ನೀಡಿರೋದಾಗಿ ಒಪ್ಪಿಕೊಂಡಿದ್ದಾನೆ.

Related Articles

Back to top button
error: Content is protected !!