ಯುವಜನ

ಪರೀಕ್ಷಾ ಭಯದಿಂದ ಇಬ್ಬರು ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಒಂದು ವಾರ ಗಡುವು ನೀಡಿದ ನ್ಯಾಯಾಲಯ

Views: 35

ಕನ್ನಡ ಕರಾವಳಿ ಸುದ್ದಿ: ಇಬ್ಬರು ಪಿಯು ವಿದ್ಯಾರ್ಥಿನಿಯರು ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು ಘಟನೆ ನಡೆದಿದ್ದು ದ್ವಿತೀಯ ಪಿಯು ಹಾಗೂ ಪ್ರಥಮ ಪಿಯು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಪರೀಕ್ಷೆಯ ಬಗ್ಗೆ ಭಯ ಹೊಂದಿದ್ದ ವಿದ್ಯಾರ್ಥಿನಿ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಅದೇ ಭಯದಿಂದಲೇ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಮಕ್ಕಳಿಗಾಗಿ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಜನವರಿ 31ರಂದು ಎಂದಿನಂತೆ ಕಾಲೇಜ್‌ಗೆ ತೆರಳಿದ್ದ ವಿದ್ಯಾರ್ಥಿನಿಯರು ಮನೆಗೆ ಮರಳಿಲ್ಲ. ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣ ಕೊಂಡೊಯ್ದಿಲ್ಲ. ಕೇವಲ ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ಕೊಂಡೊಯ್ದಿದ್ದು, ಉಚಿತ ಬಸ್ ಪ್ರಯಾಣದ ಸೌಲಭ್ಯ ಬಳಸಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು ಕಳೆದ ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ಹೇಳಿದ್ದರು. ಆದರೆ ಅದಾದ ಬಳಿಕ ಇಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ಪತ್ತೆಗೆ ಒಂದು ವಾರದ ಗಡುವು: ಮಕ್ಕಳು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಪತ್ತೆಗಾಗಿ ನ್ಯಾಯಾಲಯ ಪೊಲೀಸರಿಗೆ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಆದರೆ ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಮಕ್ಕಳು ಎಲ್ಲಿಯೇ ಇದ್ದರೂ ಸುರಕ್ಷಿತವಾಗಿ ಮನೆಗೆ ಮರಳುವಂತೆ ಮನವಿ ಮಾಡುತ್ತಿದ್ದಾರೆ.

Related Articles

Back to top button
error: Content is protected !!