ಯುವಜನ

ಬಾಯ್‌ಫ್ರೆಂಡ್‌ಗೆ ಕಳಿಸಿದ್ದ ಖಾಸಗಿ ಫೋಟೋ… ಅಪರಿಚಿತನಿಂದ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌!

Views: 87

ಕನ್ನಡ ಕರಾವಳಿ ಸುದ್ದಿ: ಬಾಯ್‌ಫ್ರೆಂಡ್‌ಗೆ ಖಾಸಗಿ ಫೋಟೋಗಳನ್ನು ಕಳಿಸಿದ್ದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಈಗ ಅಪರಿಚಿತನ ಬ್ಲ್ಯಾಕ್‌ಮೇಲ್‌ಗೆ ತತ್ತರಿಸಿ ಹೋಗಿದ್ದಾಳೆ.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ, ತನ್ನ ಗೆಳೆಯನ ಮೇಲೆ ನಂಬಿಕೆಯಿಟ್ಟು ಕೆಲವು ಪ್ರೈವೇಟ್ ಫೋಟೋಗಳನ್ನು ಕಳಿಸಿದ್ದಳು. ಆದರೆ, ಕೆಲವು ದಿನಗಳ ನಂತರ ಅದೇ ಫೋಟೋಗಳು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಯುವತಿಯ ವಾಟ್ಸಾಪ್‌ಗೆ ಬಂದಿವೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಕಿರಾತಕ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

ಫೋಟೋಗಳು ಅಪರಿಚಿತನ ಕೈ ಸೇರಿರುವುದನ್ನು ಕಂಡು ಬೆದರಿದ ಯುವತಿ, ಈ ವಿಚಾರವನ್ನು ತನ್ನ ಮಗದೊಬ್ಬ ಸ್ನೇಹಿತನ ಬಳಿ ಹಂಚಿಕೊಂಡಿದ್ದಾಳೆ. ಆ ಸ್ನೇಹಿತ ಬ್ಲ್ಯಾಕ್‌ಮೇಲರ್ ಜೊತೆ ಮಾತುಕತೆ ನಡೆಸಿ, ಯುವತಿಯ ಮಾನ ಉಳಿಸಲು ಈಗಾಗಲೇ ಒಂದು ಲಕ್ಷ ರೂಪಾಯಿ ಹಣವನ್ನು ಆತನಿಗೆ ಸಂದಾಯ ಮಾಡಿದ್ದಾನೆ. ಆದರೆ, ಹಣ ಪಡೆದರೂ ಕಿರಾತಕ ಸುಮ್ಮನಾಗದೆ, ಮತ್ತೆ ಮತ್ತೆ ಫೋಟೋಗಳನ್ನು ಕಳಿಸಿ ಹೆಚ್ಚಿನ ಹಣಕ್ಕಾಗಿ ಪೀಡಿಸಲು ಶುರು ಮಾಡಿದ್ದಾನೆ.

ಬ್ಲ್ಯಾಕ್‌ಮೇಲ್ ಕಿರುಕುಳ ಸಹಿಸಲಾರದೆ ಯುವತಿ ಈಗ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬಾಯ್‌ಫ್ರೆಂಡ್ ಮೇಲೆ ಅನುಮಾನ?

ಯುವತಿ ತನ್ನ ಫೋಟೋಗಳನ್ನು ಕಳಿಸಿದ್ದು ಕೇವಲ ಬಾಯ್‌ಫ್ರೆಂಡ್‌ಗೆ ಮಾತ್ರ. ಹೀಗಾಗಿ ಆ ಫೋಟೋಗಳು ಬ್ಲ್ಯಾಕ್‌ಮೇಲರ್ ಕೈಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಆರಂಭದಲ್ಲಿ ಯುವತಿ ತನ್ನ ಗೆಳೆಯನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಳು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸದ್ಯಕ್ಕೆ ಬಾಯ್‌ಫ್ರೆಂಡ್ ಪಾತ್ರ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಫೋಟೋ ಶೇರ್ ಆಗಿದ್ದು ಹೇಗೆ?

ಬಾಯ್‌ಫ್ರೆಂಡ್‌ನ ಮೊಬೈಲ್ ಹ್ಯಾಕ್ ಆಗಿದೆಯೇ? ಅಥವಾ ಆತ ಮೊಬೈಲ್ ರಿಪೇರಿಗೆ ಕೊಟ್ಟಾಗ ಫೋಟೋಗಳು ಲೀಕ್ ಆಗಿವೆಯೇ? ಅಥವಾ ಕ್ಲೌಡ್ ಸ್ಟೋರೇಜ್‌ನಿಂದ ಫೋಟೋ ಕಳುವಾಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ.

 

Related Articles

Back to top button
error: Content is protected !!