ಪತ್ನಿಯನ್ನು ಸಹೋದರಿ ಎಂದು ಯುವತಿಗೆ ಪರಿಚಯಿಸಿ ಕೋಟ್ಯಂತರ ರೂ. ವಂಚನೆ
Views: 82
ಕನ್ನಡ ಕರಾವಳಿ ಸುದ್ದಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ವ್ಯಕ್ತಿ ಸಾಫ್ಟ್‌ವೇರ್ ಎಂಜಿನಿಯರ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ನಗರದಲ್ಲಿ ದೂರು ದಾಖಲಾಗಿದೆ.
ವಿಜಯ್ ರಾಜ್ ಗೌಡ ಎಂಬಾತ 1.53 ಕೋಟಿ ವಂಚಿಸಿರುವುದಾಗಿ ಆರೋಪಿಸಿ 29 ವರ್ಷದ ಯುವತಿ ನೀಡಿರುವ ದೂರಿನನ್ವಯ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹಿತನಾಗಿದ್ದರೂ ಸಹ ಪತ್ನಿಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಲಾಗಿದೆ ಎಂದು ನೊಂದ ಯುವತಿ ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ವಾಸವಿದ್ದ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡನ ಪರಿಚಯವಾಗಿತ್ತು. ‘ತಾನು ಓರ್ವ ಉದ್ಯಮಿ 715 ಕೋಟಿ ರೂ. ಮೌಲ್ಯದ ಆಸ್ತಿಯಿದೆ’. ಜಾರಿ ನಿರ್ದೇಶನಾಲಯ (ಇ.ಡಿ)ದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ದೊರೆತಿದೆ ಎಂದು ಹೇಳಿಕೊಂಡಿದ್ದ. ಬಳಿಕ ಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ ಸೌಮ್ಯ ಎಂಬಾಕೆಯನ್ನು ತನ್ನ ಸಹೋದರಿ ಹಾಗೂ ತಂದೆ ಬೊರೇಗೌಡ ನಿವೃತ್ತ ತಹಶಿಲ್ದಾರ್ ಎಂದು ಪರಿಚಯಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪರಿಚಯ ಗಟ್ಟಿಯಾದ ನಂತರ, ‘ತನ್ನ ಆಸ್ತಿಯ ಸಂಬಂಧ ಇ.ಡಿ.ಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಮತ್ತು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌ಗಳಿವೆ’ ಎಂದು ಸುಳ್ಳು ಹೇಳಿ ಕೆಲವು ನಕಲಿ ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ಯುವತಿಗೆ ತೋರಿಸಿದ್ದ. ಹಣದ ಅವಶ್ಯಕತೆ ಇದೆ ಎಂದು ಹೇಳಿ ಆರಂಭದಲ್ಲಿ 15 ಸಾವಿರ ರೂ. ಪಡೆದಿದ್ದ. ನಂತರ, ಒಟ್ಟಿಗೆ ವ್ಯವಹಾರ ಮಾಡೋಣ ಎಂದು ನಂಬಿಸಿ ಯುವತಿಯ ಹೆಸರಿನಲ್ಲಿ ಸಾಲ ಮಾಡಿಸಿದ್ದಲ್ಲದೆ, ಆಕೆಯ ಸ್ನೇಹಿತರ ಬಳಿಯೂ ಸಾಲ ಮಾಡಿಸಿದ್ದ. ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಸುಳ್ಳು ಹೇಳಿ ಪುನಃ ಯುವತಿಯ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ, ಲಕ್ಷ ಲಕ್ಷ ರೂಪಾಯಿ ಸಾಲ ಪಡೆದಿದ್ದ. ಹೀಗೆ ಹಂತ-ಹಂತವಾಗಿ, ಯುವತಿ, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಒಟ್ಟು 1.53 ಕೋಟಿ ರೂಪಾಯಿ ಹಣ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ವಾಪಸ್ ನೀಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತರು ಒತ್ತಾಯಿಸಿದಾಗ ಆರಂಭದಲ್ಲಿ ಸ್ವಲ್ಪ ಹಣ ಮರಳಿಸಿದ್ದ. ಆದರೆ, ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಲ್ಲದೆ, ಹಣ ಕೇಳಿದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಹಣ ವಾಪಸ್ ಕೇಳಲು ಹೋದಾಗ, ವಿಜಯ್ ರಾಜ್ ಗೌಡ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇರುವುದು ತಿಳಿದಿದೆ. ಸಹೋದರಿ ಎಂದು ಪರಿಚಯಿಸಿದ್ದವರೇ ಆರೋಪಿಯ ಪತ್ನಿ ಎಂದು ತಿಳಿದಿದೆ ಎಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.






