ಕಾರವಾರ,ಭಟ್ಕಳ ತಹಶೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ! ಹೈ ಅಲರ್ಟ್..
Views: 38
ಕನ್ನಡ ಕರಾವಳಿ ಸುದ್ದಿ: ಕಾರವಾರ ಹಾಗೂ ಭಟ್ಕಳ ತಹಶೀಲ್ದಾರ್ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಮಂಗಳವಾರ ಬೆಳಗ್ಗೆ ‘ಗಯನಾ ರಮೇಶ್’ ಎಂಬ ಹೆಸರಿನ ಇಮೇಲ್ ಖಾತೆಯಿಂದ ಕಾರವಾರ ಹಾಗೂ ಭಟ್ಕಳ ತಹಶೀಲ್ದಾರ್ ಕಚೇರಿಗಳಿಗೆ ಬೆದರಿಕೆ ಸಂದೇಶ ರವಾನೆಯಾಗಿದೆ. “ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ” ಎಂದು ಉಲ್ಲೇಖಿಸಲಾಗಿದೆ. ಈ ಸಂದೇಶದಲ್ಲಿ “ತಮಿಳರು ಮತ್ತು ಪಾಕಿಸ್ತಾನಿಗಳ ಸೇಡು” ಎಂಬ ಅಸ್ಪಷ್ಟ ಹಾಗೂ ಗೊಂದಲಕಾರಿ ಉಲ್ಲೇಖಗಳನ್ನು ಮಾಡಲಾಗಿದೆ.
ಬೆದರಿಕೆ ಸಂದೇಶ ಬಗ್ಗೆ ತಿಳಿಯುತ್ತಿದ್ದಂತೆಯೇ ಕಾರವಾರ ತಹಶೀಲ್ದಾರ್ ನಿಶ್ಚಲ ನರೋನಾ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕಾರವಾರ ಮತ್ತು ಭಟ್ಕಳ ಪೊಲೀಸರು ಸ್ಥಳಕ್ಕೆ ಧಾವಿಸಿ ಕಚೇರಿಯಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಹೊರಗೆ ಕಳುಹಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಕಚೇರಿಯ ಮೂಲೆ ಮೂಲೆಯಲ್ಲೂ ತೀವ್ರ ತಪಾಸಣೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಅಂದಾಜಿಸಲಾಗಿದ್ದರೂ, ಸೂಕ್ಷ್ಮ ಪ್ರದೇಶಗಳಾದ ನೌಕಾನೆಲೆ ಹಾಗೂ ಕೈಗಾ ಅಣುಶಕ್ತಿ ಕೇಂದ್ರಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ತಪಾಸಣೆ ನಡೆಸಿದ್ದಾರೆ.
ಜಿಲ್ಲೆಯ ಸರ್ಕಾರಿ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಪದೇ ಪದೇ ಇಂತಹ ಬೆದರಿಕೆಗಳು ಬರುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಸದ್ಯ ಕಾರವಾರ ಮತ್ತು ಭಟ್ಕಳದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.






