ಆರ್ಥಿಕ

ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ:ಇಬ್ಬರು ಕೆಲಸದಿಂದ ವಜಾ

Views: 294

ಕನ್ನಡ ಕರಾವಳಿ ಸುದ್ದಿ: ಸ್ಯಾಬ್ರಕಟ್ಟೆಯ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಯಾಬ್ರಕಟ್ಟೆಯ ನಿವಾಸಿ ಸುರೇಶ್ ಭಟ್ ಹಾಗೂ ಕಾವಡಿ ನಿವಾಸಿ ಹರೀಶ್ ಕುಲಾಲ್ ಸಿಬಂದಿಗಳಿಬ್ಬರು ಕೋಟ್ಯಾಂತರ ರೂ. ಹಣ ದುರುಪಯೋಗ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಗೆ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ದೂರು ನೀಡಿದ್ದಾರೆ.

ಶಾಖೆಯ ಪ್ರಭಾರ ಮ್ಯಾನೇಜರ್ ಆಗಿದ್ದ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತನಾದ ಹರೀಶ್ ಕುಲಾಲ್‌ಗೆ ಬೇರೆ ಶಾಖೆಗೆ ವರ್ಗಾವಣೆ ಆಗಿದ್ದು, ಕಾವಡಿಗೆ ಹೊಸದಾಗಿ ಬಂದ ಮ್ಯಾನೇಜರ್ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಸುಮಾರು 1 ಕೋಟಿ 70 ಲಕ್ಷ ರೂ. ವ್ಯತ್ಯಾಸ ಕಂಡುಬಂದಿತು. ಸಂಘದ ಸಿಇಓ ಪರಿಶೀಲಿಸಿದಾಗ ಹಣ ದುರುಪಯೋಗವಾಗಿರುವುದು ದೃಢಪಟ್ಟಿತು. ಜತೆಗೆ ಆರೋಪಿ ಹರೀಶ್ ಕುಲಾಲ್ ತನ್ನ ಸ್ವಂತ ಚಿನ್ನಾಭರಣವನ್ನು ಅದೇ ಶಾಖೆಯಲ್ಲಿ ಅಡವಿಟ್ಟು 21 ಲಕ್ಷ ರೂ. ಪಡೆದಿದ್ದು ಅಡವಿಟ್ಟ ಚಿನ್ನಾಭರಣ ಕೂಡ ನಾಪತ್ತೆಯಾಗಿದೆ. ಹೀಗಾಗಿ ಇಬ್ಬರು ಆರೋಪಿಗಳು ಸೇರಿಕೊಂಡು ಸಂಘದಲ್ಲಿ ಹಣದ ಅವ್ಯವಹಾರ ನಡೆಸಿ ಮೋಸ ಮಾಡಿದ್ದಾರೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಡಳಿತ ಮಂಡಳಿಯ ಸಭೆ ನಡೆಸಿ ಇಬ್ಬರು ಆರೋಪಿ ಸಿಬಂದಿಗಳನ್ನು ಕೆಲಸದಿಂದ ವಜಾ ಮಾಡಿದೆ. ಗ್ರಾಹಕರ ಇತರ ಠೇವಣಿ, ಚಿನ್ನಾಭರಣಗಳನ್ನು ಪರಿಶೀಲಿಸಿದ್ದು ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಜತೆಗೆ ದುರುಪಯೋಗವಾದ ಹಣ ಮರುವಸೂಲಿಗೆ ಸೂಕ್ತ  ಕ್ರಮ ಕೈಗೊಳ್ಳುತ್ತಿದ್ದೇವೆ. ಆದ್ದರಿಂದ ಗ್ರಾಹಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸಹಕಾರಿಯ ಮುಖ್ಯಸ್ಥರು ತಿಳಿಸಿದ್ದಾರೆ.

Related Articles

Back to top button
error: Content is protected !!