ಶಿಕ್ಷಕರು ಬೈಯ್ಯುವ ಭಯದಲ್ಲಿ ಶಾಲೆ ಬಿಟ್ಟು ಕಾಡಿನ ಗುಹೆಯಲ್ಲಿ ಅಡಗಿದ ಇಬ್ಬರು ಬಾಲಕಿಯರು!
Views: 126
ಕನ್ನಡ ಕರಾವಳಿ ಸುದ್ದಿ: ಶಾಲೆಯಲ್ಲಿ ಶಿಕ್ಷಕರು ಬೈಯುತ್ತಾರೆ ಎಂಬ ಕಾರಣಕ್ಕಾಗಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯಿಂದ ತಪ್ಪಿಸಿಕೊಂಡು ಕಾಡಿನ ಗುಹೆಯಲ್ಲಿ ನಾಲ್ಕು ದಿನ ಅಡಗಿಕೊಂಡಿದ್ದರು. ಪೊಲೀಸರು ಹರಸಾಹಸಪಟ್ಟು ಸದ್ಯ ಅವರನ್ನು ರಕ್ಷಣೆ ಮಾಡಿದ್ದಾರೆ.
ಈ ಅಚ್ಚರಿ ಮತ್ತು ಆಘಾತಕಾರಿ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪೆದಬಯಲು ಆಶ್ರಮ ಬಾಲಕಿಯರ ಶಾಲೆಯಲ್ಲಿ. ಇಲ್ಲಿನ 5 ಮತ್ತು 6ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ಚುರುಕು ಇಲ್ಲದ ಕಾರಣ ಅವರಲ್ಲಿಯೇ ಉತ್ತಮವಾಗಿ ಅಸಮಾಧಾನವಿತ್ತು. ಇದರಿಂದ ಶಾಲೆಯಲ್ಲಿ ಶಿಕ್ಷಕರು ಶಿಕ್ಷೆ ನೀಡಲಿದ್ದಾರೆ ಎಂದು ಹೆದರಿದ್ದರು.
ಯಾರಿಗೂ ತಿಳಿಸದೆ ಇಬ್ಬರೂ ಶಾಲೆಯಿಂದ ನೇರವಾಗಿ ಕೊಂಚೂರು ಬೆಟ್ಟಗಳಿಗೆ ಹೋಗಿದ್ದಾರೆ. ಅಲ್ಲಿ ಅವರು ಒಂದು ಸಣ್ಣ ಗುಹೆಯನ್ನು ಕಂಡುಕೊಂಡಿದ್ದಾರೆ. ಅಲ್ಲಿಯೇ ಅಡಗಿಕೊಳ್ಳಲು ನಿರ್ಧರಿಸಿದ್ದಾರೆ. ನಾಲ್ಕು ದಿನ ಆ ಹುಡುಗಿಯರು ಕಾಡಲ್ಲಿ ಸಿಕ್ಕ ಆಹಾರವನ್ನೇ ತಿಂದು ಮತ್ತು ಹತ್ತಿರದ ಹರಿಯುತ್ತಿದ್ದ ನೀರು ಕುಡಿದು ಬದುಕುಳಿದಿದ್ದಾರೆ.
ಇತ್ತ, ಮಕ್ಕಳು ಕಾಣೆಯಾಗಿದ್ದು ಪೋಷಕರು ಮತ್ತು ಶಾಲೆಯಲ್ಲಿ ಆತಂಕ ಸೃಷ್ಟಿಸಿದೆ. ಇಬ್ಬರು ಕಣ್ಮರೆಯಾದ ಬಗ್ಗೆ ಶಾಲಾ ಅಧಿಕಾರಿಗಳು ನವೆಂಬರ್ 8 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನು ಶೋಧಿಸಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ತಂಡಗಳು ದಟ್ಟವಾದ ಭೂಪ್ರದೇಶದಲ್ಲಿ ಶೋಧ ಆರಂಭಿಸಿವೆ. ಅಂತಿಮವಾಗಿ, ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕೊಂಚೂರು ಬೆಟ್ಟದ ಗುಹೆಗಳ ಬಳಿ ಜಾಲಾಡಿದ್ದಾರೆ.
ಈ ವೇಳೆ ಬಾಲಕಿಯರು ಚಲನವಲನಗಳ ಕುರುಹುಗಳನ್ನು ಕಂಡುಬಂದಿವೆ. ತಕ್ಷಣವೇ ಅಲ್ಲಿನ ಗ್ರಾಮಸ್ಥರ ಜೊತೆ ಸಂಪರ್ಕ ಸಾಧಿಸಿ, ಅಲ್ಲಿಗೆ ತಲುಪಿ ವಿದ್ಯಾರ್ಥಿನಿಯರನ್ನು ರಕ್ಷಿಸಿದ್ದಾರೆ. ನಂತರ, ಇಬ್ಬರನ್ನೂ ಸುರಕ್ಷಿತವಾಗಿ ಅವರ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಅವರನ್ನು ಪ್ರಶ್ನಿಸಿದಾಗ, ತಾವು ಶಿಕ್ಷಣದಲ್ಲಿ ಹಿಂದೆ ಇದ್ದೆವು. ಶಿಕ್ಷಕರು ತಮ್ಮನ್ನು ಬೈಯ್ಯುವ ಭಯದಲ್ಲಿ ಶಾಲೆ ಬಿಟ್ಟು ಗುಹೆಯಲ್ಲಿ ಅಡಗಿದ್ದೆವು ಎಂದು ತಿಳಿಸಿದ್ದಾರೆ. ಬಳಿಕ ಮಕ್ಕಳಿಗೆ ಬುದ್ಧಿವಾದ ಹೇಳಿ ಪೋಷಕರೊಂದಿಗೆ ಕಳುಹಿಸಲಾಗಿದೆ.






