ಸಚಿವ ಸಂಪುಟ ಪುನಾರಚನೆ ಸರ್ಕಸ್ ಆರಂಭ: ಸಿದ್ದರಾಮಯ್ಯ, ಡಿಕೆಶಿ ದೆಹಲಿಯತ್ತ!
Views: 36
ಕನ್ನಡ ಕರಾವಳಿ ಸುದ್ದಿ: ಬಿಹಾರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆಯ ಬಿಸಿ ತೀವ್ರವಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಸಚಿವ ಸಂಪುಟ ಸರ್ಕಸ್ ಆರಂಭವಾಗುವುದು ಖಚಿತ.
ಬಿಹಾರ ಚುನಾವಣೆಯ ಫಲಿತಾಂಶದ ಮರುದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಕಾರ್ಯ ನಿಮಿತ್ತ ದೆಹಲಿಗೆ ಹೋಗುವುದು ಖಚಿತವಾಗಿತ್ತು. ಈ ಭೇಟಿಯ ವೇಳೆಯೇ ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯುವುದು ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ಪುನಾರಚನೆ ಸಂಬಂಧ ಚರ್ಚಿಸುವ ಸಂಬಂಧ ದೆಹಲಿಗೆ ತೆರಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೇಕೆದಾಟು ವಿಚಾರಣೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ನ.5ಕ್ಕೆ ದೆಹಲಿಗೆ ತೆರಳಿ ನಂತರ ಬಿಹಾರಕ್ಕೂ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಹಲವು ನಾಯಕರು ದೆಹಲಿ ಪರೇಡ್ ನಡೆಸಲು ಸಿದ್ದತೆ ನಡೆಸಿಕೊಂಡಿದ್ದಾರೆ. ಈ ನಡುವೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ತೆರಳುವುದಾಗಿ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಮತ್ತೊಮ್ಮೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದು, ಇದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದಿದ್ದಾರೆ.
ಅಭಿಪ್ರಾಯ ಏನೇ ಇದ್ದರೂ, ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿಲ್ಲ. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನಾರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ನ.15ರಂದು ನಾನು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದೇನೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ
ನಾಯಕತ್ವ ಬದಲಾವಣೆಗೆ ಡಿಕೆಶಿಗೆ ಸ್ಪಷ್ಟತೆ ಸಿಗುತ್ತಾ?
ಈ ನಡುವೆ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ವಿಚಾರಣೆಗೆ ಸಂಬಂಧಿಸಿದಂತೆ 5ರಂದು ತೆರಳಲಿದ್ದು, ಬಳಿಕ ಬಿಹಾರ ಚುನಾವಣೆಗೆಂದು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಬಿಹಾರಕ್ಕೆ ತೆರಳಿ ರಾಜ್ಯಕ್ಕೆ ವಾಪಸಾಗಲಿದ್ದಾರೆ. ಸಂಪುಟ ಪುನಾರಚನೆ ಮಾತ್ರವಲ್ಲದೇ, ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಸ್ಪಷ್ಟ ಸಂದೇಶವನ್ನು ಪಡೆದುಕೊಂಡೇ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕವಾಗಿ ದೆಹಲಿಗೆ ತೆರಳಲಿದ್ದಾರೆ.






