BREAKING: ವಕ್ವಾಡಿ ಸಮೀಪ ಮೂಡು ಗೋಪಾಡಿಯಲ್ಲಿ ಮಹಿಳೆಯೊಬ್ಬಳು ಯುವಕನನ್ನು ಕರೆದು ಬಾಗಿಲು ಹಾಕಿ ಬ್ಲ್ಯಾಕ್ ಮೇಲ್ ..6 ಮಂದಿ ಪೊಲೀಸ್ ವಶಕ್ಕೆ

Views: 761
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಸಮೀಪ ಮೂಡು ಗೋಪಾಡಿಯಲ್ಲಿ ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದ್ದು, ಮಹಿಳೆ ಸಹಿತ ಆರು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಾಸರಗೋಡಿನವನಾದ ಸಂತ್ರಸ್ಥ ಸುಧೀರ್ ಎಂಬಾತ ಈ ಹಿಂದೆ ಹಲವು ಬಾರಿ ಇಸ್ಪೀಟ್ ಆಡಲೆಂದು ಕುಂದಾಪುರಕ್ಕೆ ಬರುತ್ತಿದ್ದ. ಹೀಗೆ ಬಂದಾಗ ಮೂಡುಗೋಪಾಡಿಯ ಮಹಿಳೆ ಸಂಪರ್ಕವಾಗಿದ್ದಾಳೆ. ಬಳಿಕ ಆರೋಪಿ ಮಹಿಳೆ ಮಂಗಳವಾರ ರಾತ್ರಿ ತನ್ನ ಮನೆಯಾದ ಮೂಡುಗೋಪಾಡಿಗೆ ಸುಧೀರನನ್ನು ಬರಹೇಳಿದ್ದಾಳೆ. ಆರೋಪಿ ಹೇಳಿದ ಮನೆಗೆ ಸುಧೀರ್ ಹೋಗಿದ್ದಾನೆ. ಮನೆಗೆ ಹೋದ ಬಳಿಕ ಮಹಿಳೆ ಬಾಗಿಲು ಹಾಕಿಕೊಂಡಿದ್ದು ತನ್ನ ಸಹಚರರಿಗೆ ಬರಲು ಹೇಳಿದ್ದಾಳೆ. ಅದರಂತೆ ಇತರ ಐವರು ಆರೋಪಿಗಳು ಆಕೆಯ ಮನೆಯೊಳಗೆ ಬಂದಿದ್ದು, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಬಳಿಕ ಸಂತ್ರಸ್ಥ ಸುಧೀರ್ ಬಳಿಯಿದ್ದದ್ದೆಲ್ಲವನ್ನೂ ದೋಚಿ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟು ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಹನಿಟ್ರ್ಯಾಪ್ ಗೆ ಒಳಗಾದ ಸುಧೀರ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿ ಕಿಂಗ್ ಪಿನ್ ಮಹಿಳೆ ಸಹಿತ ಆರು ಜನರನ್ನು ಬಂಧಿಸಿದ್ದಾರೆ ಎಂದು ತಿಳಿಯು ಬಂದಿದೆ.ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಏನಿದು ಹನಿಟ್ರ್ಯಾಪ್ ?
ಹನಿಟ್ರ್ಯಾಪ್ ಎಂಬುದು ವ್ಯಕ್ತಿಯ ಭಾವನಾತ್ಮಕ, ಲೈಂಗಿಕ ಅಥವಾ ವೈಯಕ್ತಿಕ ದುರ್ಬಲತೆಯನ್ನು ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಒಂದು ಮಾರ್ಗ. ಇದನ್ನು ಸಾಮಾನ್ಯವಾಗಿ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಣಕ್ಕೆ ಬೇಡಿಕೆ ಅಥವಾ ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ಬಳಸಲಾಗುತ್ತದೆ.