ಸಾಂಸ್ಕೃತಿಕ

ನಾಲ್ಕನೇ ವಾರದಲ್ಲೂ ಹೌಸ್‌ಫುಲ್ ಶೋ!  ಪ್ರೇಕ್ಷಕರ ಮನ ಗೆದ್ದಿರುವ ‘ಸು ಪ್ರಂ ಸೋ ಕಲೆಕ್ಷನ್ ಎಷ್ಟು ಗೊತ್ತಾ?

Views: 177

ಕನ್ನಡ ಕರಾವಳಿ ಸುದ್ದಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಮತ್ತು ಹೊಸತನದ ನಿರೂಪಣೆಯೊಂದಿಗೆ ಪ್ರೇಕ್ಷಕರ ಮನ ಗೆದ್ದಿರುವ ‘ಸು ಪ್ರಂ ಸೋ’ ಸಿನಿಮಾ ಇದೀಗ ತನ್ನ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಜೆ.ಪಿ. ತುಮಿನಾಡು ನಿರ್ದೇಶನ ಮಾಡಿರುವ ಈ ಚಿತ್ರವು ಬಿಡುಗಡೆಯಾದ ನಾಲ್ಕನೇ ವಾರಕ್ಕೂ ಹೌಸ್‌ಫುಲ್ ಪ್ರದರ್ಶನ ಕಂಡು ಬೆಳ್ಳಿತೆರೆ ಮೇಲೆ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿದೆ. ಬಿಗ್ ಸ್ಟಾರ್‌ಗಳ ಸಿನಿಮಾಗಳ ನಡುವೆ ಬಿಡುಗಡೆಯಾಗಿದೆ.ಸ್ವಾತಂತ್ರೋತ್ಸವ ರಜೆ ಮತ್ತು ವೀಕೆಂಡ್ ಒಟ್ಟಿಗೆ ಬಂದಿದ್ದರಿಂದ ಸಿನಿಮಾಗೆ ಮತ್ತಷ್ಟು ಬೂಸ್ಟ್ ಸಿಕ್ಕಿತು. ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳಲ್ಲಿ ಶೋಗಳು ಹೌಸ್ ಫುಲ್ ಆಗಿದ್ದು, ದಿನದ ಹಿಂದಿನ ದಿನವೂ ಟಿಕೆಟ್‌ಗಾಗಿ ಹೆಚ್ಚಿನ ಬೇಡಿಕೆ ಮುಂದುವರಿದಿತ್ತು. ಗಂಟೆಗೆ ಸಾವಿರಾರು ಟಿಕೆಟ್‌ಗಳು ಮಾರಾಟವಾಗುತ್ತಿದ್ದರೆಂಬ ಅಂಕಿಅಂಶಗಳು ಚಿತ್ರದ ಭರ್ಜರಿ ಓಟವನ್ನು ದೃಢಪಡಿಸುತ್ತವೆ. ತಜ್ಞರ ಅಂದಾಜು ಪ್ರಕಾರ, ಈ ಸಿನಿಮಾ ಈಗಾಗಲೇ 97.6 ಕೋಟಿಗಳಷ್ಟು ಕಲೆಕ್ಷನ್ ಗಳಿಸಿದ್ದು, ನೂರು ಕೋಟಿ ಗಡಿಯತ್ತ ಸಾಗುತ್ತಿದೆ.

ಕರ್ನಾಟಕದಲ್ಲೇ 75 ಕೋಟಿಗಳಷ್ಟು ಆದಾಯ ಗಳಿಸಿರುವ ಚಿತ್ರವು, ಹೊರ ರಾಜ್ಯಗಳಲ್ಲಿ 10.1 ಕೋಟಿ ಮತ್ತು ವಿದೇಶಗಳಲ್ಲಿ 12.5 ಕೋಟಿಗಳಷ್ಟು ವಸೂಲಿ ಮಾಡಿದೆ ಎನ್ನಲಾಗಿದೆ. ಇಷ್ಟೇ ಅಲ್ಲ, ರಾತ್ರಿ ಶೋಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಿನಿಮಾ ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ಸೇರಲಿದೆ ಎಂಬ ವಿಶ್ವಾಸವನ್ನು ಚಿತ್ರ ತಂಡ ಹೊಂದಿದೆ.

ಪ್ರಮುಖ ಪಾತ್ರಗಳಲ್ಲಿ ಜೆ.ಪಿ. ತುಮಿನಾಡು, ಶನೀಲ್‌ ಗೌತಮ್, ಸಂಧ್ಯಾ ಅರೆಕರೆ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದು, ಅವರ ಅಭಿನಯವೇ ಸಿನಿಮಾಕ್ಕೆ ಮತ್ತೊಂದು ಶಕ್ತಿ ನೀಡಿದೆ. ವಿಭಿನ್ನ ಕಥಾವಸ್ತು, ಬಲಿಷ್ಠ ನಿರ್ದೇಶನ ಮತ್ತು ಪ್ರೇಕ್ಷಕರ ನೇರ ಬೆಂಬಲದಿಂದಾಗಿ ‘ಸು ಪ್ರಂ ಸೋ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಹಾದಿಯಲ್ಲಿದೆ.

Related Articles

Back to top button