ಧರ್ಮಸ್ಥಳ ಗ್ರಾಮದಲ್ಲಿ ನಾಪತ್ತೆ, ಅಸ್ವಾಭಾವಿಕ ಸಾವುಗಳ ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ

Views: 106
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಪ್ರಕರಣಗಳು ಹಾಗೂ ಅಸ್ವಾಭಾವಿಕ ಸಾವು ಪ್ರಕರಣಗಳನ್ನು ಡಿಜಿಪಿ ಮಟ್ಟದ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖೆಗೊಳಪಡಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಗೃಹ ಇಲಾಖೆಯಿಂದ ಹೊರಡಿಸಲಾಗಿರುವ ಆದೇಶದ ಅನುಸಾರ ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ ಮೊಹಾಂತಿ ನೇತೃತ್ವದಲ್ಲಿ 4 ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರ ಆಧರಿಸಿ ಎಸ್‌ಐಟಿ ರಚಿಸಲಾಗಿದೆ. ಪತ್ರದಲ್ಲಿ ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಖಾಸಗಿ ಮಾಧ್ಯಮವೊಂದರಲ್ಲಿ ಮನುಷ್ಯರೊಬ್ಬರ ತಲೆಬುರುಡೆ ದೊರಕಿದ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದ ಹೇಳಿಕೆಯನ್ನು ಪ್ರಸಾರ ಮಾಡಲಾಗಿದೆ.
ಮಹಿಳಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಹಾಗೂ ನಾಪತ್ತೆ ಪ್ರಕರಣಗಳು ಹಲವು ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ನಡೆದಿರುವುದಾಗಿ ತಿಳಿಸಲಾಗಿದೆ. ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಆಯೋಗದ ಪತ್ರ ಆಧರಿಸಿ ಈ ಪ್ರಕರಣ ಒಳಗೊಂಡಂತೆ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸುವುದಾಗಿ ಗೃಹ ಇಲಾಖೆ ತಿಳಿಸಿದೆ.
ಎಸ್‌ಐಟಿಯಲ್ಲಿ ಪ್ರಣವ್ ಮೊಹಾಂತಿ ಮುಖ್ಯಸ್ಥರಾಗಿದ್ದು, ಇತರ ಐಪಿಎಸ್ ಅಧಿಕಾರಿಗಳಾಗಿರುವ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ಎನ್. ಅನುಚೇತ್, ಬೆಂಗಳೂರು ಸಿಎಆರ್ ಕೇಂದ್ರ ಸ್ಥಾನದ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ, ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಅವರು ಸದಸ್ಯರಾಗಿದ್ದಾರೆ.
ಎಸ್‌ಐಟಿಗೆ ಧರ್ಮಸ್ಥಳದಲ್ಲಿ ದಾಖಲಾಗಿರುವ ಪ್ರಕರಣವೂ ಸೇರಿದಂತೆ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಪಟ್ಟಂತೆ ದಾಖಲಾಗಿರುವ ಹಾಗೂ ದಾಖಲಾಗುವ ಇತರ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಡಿ.ಜಿ. ಮತ್ತು ಐಜಿಪಿ ಅವರು ಈ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವುದು. ತಂಡಕ್ಕೆ ಅವಶ್ಯವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒದಗಿಸುವುದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಲಭ್ಯವಿರುವ ಸಂಪನೂಲಗಳನ್ನು ಬಳಸಿಕೊಳ್ಳುವುದು ಹಾಗೂ ತನಿಖೆಯ ಪ್ರಗತಿಯನ್ನು ಆಗಿಂದಾಗ್ಗೆ ಡಿಜಿ ಮತ್ತು ಐಜಿಪಿ ಅವರಿಗೆ ವಹಿಸುವುದು ಎಂದು ಸೂಚಿಸಲಾಗಿದೆ. ತನಿಖಾ ವರದಿಯನ್ನು ಎಸ್‌ಐಟಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.