ಶಿಕ್ಷಣ

ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಕಾರ್ಯಗಾರ

"ವ್ಯವಹಾರ ಜೀವನಕ್ಕೆ ಅಗತ್ಯವಾದ ಸಂಖ್ಯಾಶಾಸ್ತ್ರ ಮೈನರ್ ವಿಷಯ ಆಗುತ್ತಿರುವುದು ಅತ್ಯಂತ ವಿಷಾದನೀಯ" ---ಡಿಡಿಪಿಯು ಮಾರುತಿ

Views: 107

ಕನ್ನಡ ಕರಾವಳಿ ಸುದ್ದಿ: “ಸಂಖ್ಯಾಶಾಸ್ತ್ರವು ಬಹುತೇಕ ಉದ್ಯೋಗಗಳಲ್ಲಿ ಅಗತ್ಯವಿದೆ. ವ್ಯವಹಾರ, ಆರೋಗ್ಯ, ತಂತ್ರಜ್ಞಾನ, ಸರ್ಕಾರ, ಶಿಕ್ಷಣ,ದತ್ತಾಂಶ ವಿಶ್ಲೇಷಣೆ, ಮಾರುಕಟ್ಟೆ ವಿಶ್ಲೇಷಣೆ, ಹಣಕಾಸು ಊಹೆ ಮುಂತಾದ ಕ್ಷೇತ್ರಗಳಲ್ಲಿ ಇದು ಉಪಯೋಗಿಯಾಗುತ್ತದೆ. ದಿನನಿತ್ಯದ ಸಮೀಕ್ಷೆಗಳು, ಸುದ್ದಿಗಳಲ್ಲಿನ ಅಂಕಿಅಂಶಗಳು ಮತ್ತು ವಿಜ್ಞಾನ ವರದಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಂಖ್ಯಾಶಾಸ್ತ್ರ ಸಹಾಯವಾಗುತ್ತದೆ. ಆದರೆ ಇಂದು ಇಂತಹ ಅಮೂಲ್ಯ ವಿಷಯವನ್ನು ವಿದ್ಯಾರ್ಥಿಗಳು ಆಸೆ ಪಟ್ಟು ಓದದೇ, ಇರುವುದರಿಂದ ಮತ್ತು ಸಮಾಜದಲ್ಲಿ ಒಲವು ಕೂಡ ಕಡಿಮೆಯಾಗುತ್ತಿರುವುದು ಸಂಖ್ಯಾಶಾಸ್ತ್ರ ಮೈನರ್ ವಿಷಯ ಆಗುತ್ತಿರುವುದು ಅತ್ಯಂತ ವಿಷಾದನೀಯ” ಎಂದು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಕಳವಳ ವ್ಯಕ್ತಪಡಿಸಿದರು.

ಸಂಖ್ಯಾಶಾಸ್ತ್ರ ವಿಷಯವನ್ನು ಬೆಳೆಸುವ ನಿಟ್ಟಿನಲ್ಲಿ ಸಂಖ್ಯಾಶಾಸ್ತ್ರ ಪೋರಂ ಚಟುವಟಿಕೆಗಳಿಗೆ ಪ್ರತಿ ವರ್ಷವೂ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ—- ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ 

ಉಡುಪಿ ಜಿಲ್ಲಾ ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇದರ ಜಂಟಿ ಆಶ್ರಯದಲ್ಲಿ ಬುಧವಾರ ಜನತಾ ಪಿಯು ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ವಿಷಯ ಬೋಧಿಸುತ್ತಿರುವ ಉಪನ್ಯಾಸಕರುಗಳಿಗೆ ನವೀನ ಬೋಧನಾ ತಂತ್ರಗಳ ಮಾಹಿತಿ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳಲ್ಲಿ ಸಂಖ್ಯಾಶಾಸ್ತ್ರ ವಿಷಯದಲ್ಲಿ ಆಸಕ್ತಿ ಕೆರಳಿಸುವ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ಕುರಿತು ಪೋಸ್ಟರ್ ಮೇಕಿಂಗ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಸಂಖ್ಯಾಶಾಸ್ತ್ರದ ಮಹತ್ವ ಕುರಿತು ಅರಿವು ಮೂಡಿಸಬೇಕು ಅದೇ ರೀತಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ, ಶಿಸ್ತು, ವ್ಯವಹಾರ ಮುಂತಾದ ಸಂಗತಿಗಳ ಕುರಿತು ತಿಳಿ ಹೇಳಿ ಆದರ್ಶ ಜೀವನ ನಡೆಸುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಜನತಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಸಂಖ್ಯಾಶಾಸ್ತ್ರ ದ ಇಂದಿನ ಕಾರ್ಯಗಾರದಲ್ಲಿ ಸಂಖ್ಯಾಶಾಸ್ತ್ರದ ಹೊಸ ಸಾಧ್ಯತೆಗಳ ಬಗ್ಗೆ ವಿನೂತನ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಶ್ಲಾಘನೀಯ ಸಂಗತಿ ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಸಂಖ್ಯಾಶಾಸ್ತ್ರ ವಿಷಯವನ್ನು ಬೆಳೆಸುವ ನಿಟ್ಟಿನಲ್ಲಿ ಸಂಖ್ಯಾಶಾಸ್ತ್ರ ಪೋರಂ ಚಟುವಟಿಕೆಗಳಿಗೆ ಪ್ರತಿ ವರ್ಷವೂ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಉಡುಪಿ ಶ್ಯಾಮಿಲಿ ಪಿಯು ಕಾಲೇಜಿನ ಪ್ರಾಂಶುಪಾಲ ರಾಜ ಮೋಹನ್ ಸಂಖ್ಯಾಶಾಸ್ತ್ರ ಉಪನ್ಯಾಸಕರಿಗೆ ನವೀನ ಬೋಧನಾ ತಂತ್ರಗಳ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಆರೋಗ್ಯದಲ್ಲಿ ಸಂಖ್ಯಾಶಾಸ್ತ್ರ ಎಂಬ ವಿಷಯದ ಕುರಿತು ಪೋಸ್ಟರ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಿ ವಿಜೇತರಾದ ಪೂರ್ಣಪ್ರಜ್ಞಾ ಕಾಲೇಜಿನ ಸಿಯಾ ಶೆಟ್ಟಿ, ಭಂಡಾರಕರ್ಸ್ ಕಾಲೇಜಿನ ಅಮೂಲ್ಯ ಹಾಗೂ ಎಸ್. ಆರ್.ಪಿಯು. ಕಾಲೇಜಿನ ಸುಹೇರ ನವಾಜ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

ನಿರ್ಣಾಯಕರಾಗಿ ನಯನಾ ಲೋಬೋ, ಪವನಕುಮಾರ ಹಾಗೂ ಶರತ್ ರಾವ್ ಕಾರ್ಯ ನಿರ್ವಹಿಸಿದರು. ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಂಖ್ಯಾಶಾಸ್ತ್ರ ವಿಷಯದಲ್ಲಿ ನೂರು ಅಂಕ ಪಡೆದ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ನೇತ್ರಾವತಿ ಬುಡ್ಡಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ನಾಗಶ್ವೇತ ಪ್ರಾರ್ಥಿಸಿ,ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿಗಾರ್ ವಕ್ವಾಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಈಶ್ವರ್ ವಂದಿಸಿದರು. ಮಣಿಪಾಲ ಜ್ಞಾನಸುಧಾ ಪಿಯು ಕಾಲೇಜಿನ ಉಪನ್ಯಾಸಕ ರವಿ ಜಿ ನಿರೂಪಿಸಿದರು.

Related Articles

Back to top button