ಸಾಂಸ್ಕೃತಿಕ

‘ಕಾಂತಾರ: ಚಾಪ್ಟರ್‌ 1’ ಶೂಟಿಂಗ್ ವೇಳೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ! ದೋಣಿ ಮಗುಚಿ ಕ್ಯಾಮೆರಾ ನೀರುಪಾಲು, ಕಲಾವಿದರು ಪಾರು

Views: 169

ಕನ್ನಡ ಕರಾವಳಿ ಸುದ್ದಿ: ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿ, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ: ಚಾಪ್ಟರ್‌ 1 ಈ ಸಿನಿಮಾಕ್ಕೆ ಆರಂಭದಿಂದಲೇ ಸಾಕಷ್ಟು ಸಂಕಷ್ಟ ಎದುರಾಗಿದೆ. ಕಲಾವಿದರ ಸಾವು, ವಾಹನ ಅಪಘಾತ, ಶೂಟಿಂಗ್‌ ಸ್ಥಗಿತಗೊಳಿಸುವಂತೆ ದೂರು…ಹೀಗೆ ಸಾಲು ಸಾಲು ವಿಘ್ನ ಎದುರಿಸುತ್ತಲೇ ಬಂದ ಚಿತ್ರತಂಡಕ್ಕೆ ಇದೀಗ ಮತ್ತೊಂದು ತೊಂದರೆ ಎದುರಾಗಿದೆ.

ತೀರ್ಥಹಳ್ಳಿಯಲ್ಲಿ ಶೂಟಿಂಗ್‌ ನಡೆಸುತ್ತಿದ್ದಾಗ ಕಲಾವಿದರಿದ್ದ ದೋಣಿ ಜಲಾಶಯದಲ್ಲಿ ಮಗುಚಿದೆ. ಅದೃಷ್ಟವಶಾತ್‌ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಕ್ಯಾಮೆರಾ ಸೇರಿದಂತೆ ಇತರ ಸಾಮಗ್ರಿಗಳು ನೀರು ಪಾಲಾಗಿವೆ ಎಂದು ವರದಿಯೊಂದು ತಿಳಿಸಿದೆ.

ಚಿತ್ರದ ಕೊನೆಯ ಹಂತದ ಶೂಟಿಂಗ್‌ಗಾಗಿ ರಿಷಬ್‌ ಶೆಟ್ಟಿ ಮತ್ತು ತಂಡ ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬೀಡುಬಿಟ್ಟಿದೆ. ಅದರಂತೆ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ರಾತ್ರಿ ಶೂಟಿಂಗ್‌ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ರಿಷಬ್‌ ಸೆಟ್ಟಿ ಸೇರಿದಂತೆ ಸುಮಾರು 30 ಮಂದಿ ಕಲಾವಿದರು ಸ್ಥಳದಲ್ಲಿದ್ದರು. ಅಲ್ಲದೆ ಮಗುಚಿದ ದೋಣಿಯಲ್ಲಿ ರಿಷಬ್‌ ಕೂಡ ಇದ್ದರು ಎನ್ನಲಾಗಿದ್ದು, ಎಲ್ಲರೂ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಾವಿದರೆಲ್ಲರೂ ಪಾರಾಗಿದ್ದಾರೆ. ಆದರೆ ಕ್ಯಾಮೆರಾ ಸೇರಿದಂತೆ ಬೆಲೆಬಾಳುವ ಉಪಕರಣಗಳು ನೀರು ಪಾಲಾಗಿವೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಕೇರಳ ಮೂಲದ ಮಿಮಿಕ್ರಿ ಕಲಾವಿದ ವಿ.ಕೆ.ವಿಜು ಹೃದಯಾಘಾತದಿಂದ ಮೃತಪಟ್ಟಿದ್ದರು. ಆ ಮೂಲಕ ವಿಜು ಸೇರಿ ಚಿತ್ರ ಆರಂಭವಾದ ಬಳಿಕ ಮೃತ ಪಟ್ಟ ಕಲಾವಿದರ ಸಂಖ್ಯೆ ಮೂರಕ್ಕೇರಿತ್ತು. ಈ ಮೊದಲು ಸಿನಿಮಾದಲ್ಲಿ ನಟಿಸುತ್ತಿದ್ದ ಕೇರಳದ ಜೂನಿಯರ್‌ ಆರ್ಟಿಸ್ಟ್‌ ಕಪಿಲ್ ಎಂಬವರು ಕೊಲ್ಲೂರು ಸಮೀಪದ ಸೌಪರ್ಣಿಕಾ ನದಿಗೆ ಈಜಲು ತೆರಳಿ ಮುಳುಗಿ ಮೃತಪಟ್ಟಿದ್ದರು. ಇದಾದ ಬಳಿಕ ಪ್ರಮುಖ ಪಾತ್ರಧಾರಿ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನರಾಗಿದ್ದರು.

ಇದಕ್ಕೂ ಮೊದಲು ಚಿತ್ರತಂಡದ ಕಲಾವಿದರು ಇದ್ದ ಮಿನಿ ಬಸ್‌ ಕೊಲ್ಲೂರು ಸಮೀಪ ಅಪಘಾತಕ್ಕೀಡಾಗಿತ್ತು. ಸಿನಿಮಾ ತಂಡ ಈ ವರ್ಷಾರಂಭದಲ್ಲಿ ಹಾಸನದಲ್ಲಿ ಶೂಟಿಂಗ್‌ ಶುರು ಮಾಡಿತ್ತು. ಈ ವೇಳೆ ಶೂಟಿಂಗ್‌ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದೂರು ಕೂಡ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲದೆ ಮುಹೂರ್ತ ನೆರವೇರಿ ಶೂಟಿಂಗ್‌ ಆರಂಭಿಸುತ್ತಿದ್ದಂತೆ ದೈವ ನರ್ತಕರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗೆ ಸಾಲು ಸಾಲು ವಿಘ್ನ ಎದುರಾಗುತ್ತಿದೆ.

Related Articles

Back to top button
error: Content is protected !!